ಜನಸಾಮಾನ್ಯರು, ಮಠ ಮಾನ್ಯಗಳ ನಡುವೆ ಉತ್ತಮ ಸಂಬಂಧ ಅಗತ್ಯ: ಕೋಡಿಮಠ ಶ್ರೀ

ಹೊಸದಿಗಂತ, ಮಡಿಕೇರಿ:
ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಧ್ಯವೆಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಮಠದ ಆವರಣದಲ್ಲಿ ಆಯೋಜಿಸಿದ್ದ ಕೊಡಗು, ಹಾಸನ ಮಠಾಧೀಶರ ಪರಿಷತ್ತಿನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನಸಾಮಾನ್ಯರು ಹಾಗೂ ಮಠ ಮಾನ್ಯಗಳ ನಡುವೆ ಉತ್ತಮ ಸಂಬಂಧ, ಸಾಮರಸ್ಯವಿದ್ದರೆ ಸಮಾಜ ನೆಮ್ಮದಿಯಿಂದ ಉತ್ತಮವಾಗಿರುತ್ತದೆ ಎಂದರು.
ಹಿಂದಿನ ಕಾಲದಿಂದಲೂ ಸಮಾಜಕ್ಕೆ ವೀರಶೈವ ಲಿಂಗಾಯತ ಮಠಗಳ ಕೊಡುಗೆ ಬಹಳಷ್ಟಿದೆ ಅವುಗಳು ಮುಂದುವರೆಯಬೇಕು. ಇಂದು ಹಲವು ಮಠಗಳು, ಸ್ವಾಮೀಜಿಗಳು ಸಂಕಷ್ಟದಲ್ಲಿದ್ದಾರೆ. ಅದಕ್ಕಾಗಿ ಎಲ್ಲಾ ಮಠಾಧೀಶರು ಸಂಘಟಿತರಾಗಬೇಕು. ಪರಸ್ಪರ ಸೌಹಾರ್ದತೆಯಿಂದ ಇರಬೇಕು. ಆ ಮೂಲಕ ಮಠಗಳ ಆಸ್ತಿಗಳನ್ನು ರಕ್ಷಿಸಿಕೊಂಡು ಹೋಗಬೇಕು ಎಂದರು.
ಸಭೆಯಲ್ಲಿ ಕೊಡಗು, ಹಾಸನ ಮಠಾಧೀಶರ ಪರಿಷತ್ತು ರಚನೆ ಸಂಬಂಧ ಸುದೀರ್ಘ ಚರ್ಚೆ ನಡೆದು ಕೊಡಗು,ಹಾಸನ ವೀರಶೈವ ಲಿಂಗಾಯತ ಮಠಾಧೀಶರ ನೂತನ ಆಡಳಿತ ಮಂಡಳಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಕೋಡಿಮಠದ ಸ್ವಾಮೀಜಿ,
ಅಧ್ಯಕ್ಷರಾಗಿ ಅರಕಲಗೂಡು ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಉಪಾಧ್ಯಕ್ಷರಾಗಿ ವೀರಾಜಪೇಟೆ, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ. ಯಳನಾಡು ಮೂರು ಕಳಸ ಮಠದ ಶ್ರೀ ಜ್ಞಾನಪ್ರಭು ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರಸಂತೆ ಮುದ್ದಿನ ಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿಗಳಾಗಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಹಾಸನ ತನ್ನೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಖಜಾಂಚಿಯಾಗಿ ಅರಕಲಗೂಡು ಚಿಲುಮೆ ಮಠದ ಜಯದೇವ ಸಾಮೀಜಿ, ಉಳಿದಂತೆ ಎರಡು ಜಿಲ್ಲೆಗಳಲ್ಲಿ ಎಲ್ಲಾ ಸ್ವಾಮೀಜಿಗಳನ್ನು ನಿರ್ದೇಶಕರುಗಳಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಕೊಡಗು, ಹಾಸನ ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!