ಹೊಸದಿಗಂತ ವರದಿ,ಕಲಬುರಗಿ:
ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ರೂಪಿಸುವ ಪ್ರಮುಖ ಶಕ್ತಿಯಾಗಿದ್ದು, ಅವರು ತಮ್ಮ ಜ್ಞಾನವನ್ನು ಸಮಾಜದ ಉನ್ನತಿಗೆ ಬಳಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ 10ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಪದವಿಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಸಾಧನೆ ದೀರ್ಘಕಾಲೀನ ಪರಿಶ್ರಮ ಮತ್ತು ಸಮರ್ಪಣೆಯ ಫಲವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪಾತ್ರವೂ ಮಹತ್ವದ್ದಾಗಿದೆ. ತಾಂತ್ರಿಕ ಬದಲಾವಣೆಗಳು ವೇಗವಾಗಿ ನಡೆಯುತ್ತಿರುವ ಇಂದಿನ ಕಾಲದಲ್ಲಿ, ಯುವಕರು ತಮ್ಮ ಜ್ಞಾನವನ್ನು ಸಮಸ್ಯೆ ಪರಿಹಾರಕ್ಕೆ ಹಾಗೂ ಸಮಾಜದ ಅಭಿವೃದ್ಧಿಗೆ ಬಳಸಬೇಕು ಎಂದು ರಾಜ್ಯಪಾಲರು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ (NEP) ಪ್ರಕಾರ ಬಹುಶಿಸ್ತು ಮತ್ತು ಅಂತರಶಿಸ್ತು ಶಿಕ್ಷಣ ಈಗಿನ ಅವಶ್ಯಕತೆಯಾಗಿದ್ದು, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಎರಡೂ ಸಮತೋಲನದಲ್ಲಿರಬೇಕು. ಪ್ರತಿಫಲದ ನಿರೀಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಪ್ರಯತ್ನಿಸಿದಾಗ ಸದಾ ಉತ್ತಮ ಫಲಿತಾಂಶಗಳು ದೊರೆಯುತ್ತವೆ ಎಂದು ಹೇಳಿದರು.



