ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೊತ್ತೇ ಆಗಲಿಲ್ಲ ಅಲ್ವಾ? 365 ದಿನಗಳನ್ನು ಕಳೆದಿದ್ದು? ಒಂದು ವರ್ಷದಲ್ಲಿ ನಾವು ಏನೆಲ್ಲಾ ಪಡೆದುಕೊಂಡಿದ್ದೇವೆ, ಏನೆಲ್ಲಾ ಕಳೆದುಕೊಂಡಿದ್ದೇವೆ? ಆದರೆ ಜೀವಿಸಿದ್ದೇವೆ. ನೆನಪಿನ ಬುತ್ತಿಗೆ ಇನ್ನೊಂದು ವರ್ಷದ ಮಧುರ ಕ್ಷಣಗಳನ್ನು ಸೇರಿಸಿದ್ದೀವಿ..
ಎಲ್ಲ ಹೊಸದಿಗಂತ ಓದುಗರಿಗೂ ಕ್ಯಾಲೆಂಡರ್ ಹೊಸ ವರ್ಷದ ಶುಭಾಷಯಗಳು. ಹೊಸ ನೀರು ಬಂದಂತೆ ಹಳೆ ನೀರು ಹರಿದುಕೊಂಡು ಹೋಗಲೇಬೇಕು, ಆದರೆ ದಾರಿಯಲ್ಲಿ ಸಿಕ್ಕ ಅನುಭವಗಳು, ಒಳ್ಳೆಯ ಗೆಳೆತನ, ಪ್ರೀತಿ, ಪಾಠಗಳನ್ನು ಮರೆಯುವಂತಿಲ್ಲ. ಅವುಗಳೆಲ್ಲ ಸೇರಿಯೇ ತಾನೆ ಮನುಷ್ಯನ ವ್ಯಕ್ತಿತ್ವ ನಿರ್ಮಾಣವಾಗೋದು?
ಮನೆಯ ಗೋಡೆಗಳನ್ನೊಮ್ಮೆ ನೋಡಿ, ನೆನ್ನೆ ಮೊನ್ನೆ ಹೊಸ ಕ್ಯಾಲೆಂಡರ್ ಖರೀದಿಸಿದ ನೆನಪು ಆದರೆ ಈಗ ಅದೇ ಕ್ಯಾಲೆಂಡರ್ ತೆಗೆದು ಮತ್ತೊಂದು ಕ್ಯಾಲೆಂಡರ್ ಗೋಡೆಗೇರಿಸುವ ಸಮಯ. ಕಳೆದ ವರ್ಷ ಏನೇ ಕೆಟ್ಟ ಘಟನೆಗಳು ನಡೆದಿರಲಿ, ನಿಮ್ಮವರನ್ನು ಭಾವನಾತ್ಮಕವಾಗಿ ಕಳೆದುಕೊಂಡಿದ್ದಲ್ಲಿ ಇದೀಗ ಹೊಸ ಜೀವನ ಆರಂಭಿಸೋಕೆ ಹೊಸ ಸಮಯ.
ಈ ವರ್ಷ ನಿಮ್ಮೆಲ್ಲ ಕನಸುಗಳು ಸಮೀಪಿಸಲಿ, ಈಡೇರಲಿ, ಇನ್ನಷ್ಟು ಆರೋಗ್ಯ ನಿಮ್ಮದಾಗಲಿ, ಪ್ರೀತಿಪಾತ್ರರು ಇನ್ನಷ್ಟು ಹತ್ತಿರವಾಗಲಿ ಎನ್ನುವುದು ನಮ್ಮ ಆಶಯ. ಕಳೆದ ವರ್ಷ ನಾವೆಲ್ಲಾ ಎಷ್ಟು ತಪ್ಪು ಮಾಡಿದ್ದೇವೆ? ಎಲ್ಲೆಲ್ಲೆ ಎಡವಿದ್ದೇವೆ. ಈ ವರ್ಷವೂ ತಪ್ಪು ಮಾಡುತ್ತೇವೆ, ಕಾಲು ಎಡವುತ್ತೇವೆ, ಆದರೆ ಮತ್ತದೇ ಹಳೆ ತಪ್ಪುಗಳನ್ನು ಮಾಡಿಯಲ್ಲ! ಹೊಸ ತಪ್ಪುಗಳಾದರೆ ತಿದ್ದಿಕೊಳ್ಳೋಣ, ಆದಷ್ಟು ನಮ್ಮಿಂದ ಇತರರಿಗೆ ನೋವಾಗದಂತೆ ಜೀವಿಸೋಣ..
ಹೊಸ ವರ್ಷಕ್ಕೆ ಈ ರೆಸೊಲ್ಯೂಷನ್ಸ್ ನಿಮ್ಮದಾಗಲಿ, ಇದರಿಂದ ಇನ್ನಷ್ಟು ಕ್ವಾಲಿಟಿ ಜೀವನ ಕಂಡುಕೊಳ್ಳಬಹುದು..
- ಮೊಬೈಲ್, ಟಿವಿ ಬಳಕೆಗೆ ಗುಡ್‌ಬೈ ಹೇಳಿ, ಕಿರುಗಣ್ಣಲ್ಲಿ ಪ್ರೀತಿಯಿಂದ ಪುಸ್ತಕಗಳ ಮೇಲೆ ಕಣ್ಣಾಡಿಸಿ, ಕೆಲವು ದಿನ ಹಿಡಿಯಬಹುದು ಆದರೆ ಅವುಗಳ ಮೇಲೆ ನಿಮಗೆ ಪ್ರೀತಿಯಾಗೋದು ಗ್ಯಾರೆಂಟಿ.
- ದಿನವೂ ಎಷ್ಟು ಹೊತ್ತಿಗಾದರೂ ನೀವು ಏಳುತ್ತಿರಬಹುದು, ಅದರಲ್ಲಿ ಒಂದು ಗಂಟೆ ಮುಂಚೆ ಏಳಿ, ಎದ್ದು ಯಾವುದೇ ರೀತಿಯ ಫಿಸಿಕಲ್ ವರ್ಕೌಟ್ ಮಾಡಿ.
- ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ, ಕಡಿಮೆ ಎಣ್ಣೆ, ಹೊರಗಿನ ಆಹಾರ ಆಸೆ ಬಿಡಿ ಹಾಗೂ ಹೆಚ್ಚು ಹಣ್ಣು, ತರಕಾರಿ ಸೇವನೆ ಮಾಡಿ.
- ಭಾವನಾತ್ಮಕವಾಗಿ ನೊಂದವರಿಗೆ ಹೆಗಲು ನೀಡಿ, ಆದರೆ ನಿಮ್ಮನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ ಎಂದೆನಿಸದರೆ ಮುಲಾಜಿಲ್ಲದೆ ಜಾಗ ಖಾಲಿ ಮಾಡಿ.
- NO ಎನ್ನೋದನ್ನು ಕಲಿಯಿರಿ, ಜನ ಏನಂದುಕೊಳ್ತಾರೆ, ಬೇಜಾರಾಗ್ತಾರೆ ಅನ್ನೋ ಭಾವನೆ ಬಿಟ್ಟುಬಿಡಿ.
- ಕುಟುಂಬದವರಿಗೆ ಸಮಯ ನೀಡಿ, ನಿಮ್ಮ ಸ್ನೇಹಿತರು ಎಷ್ಟು ಮುಖ್ಯವೋ ಕುಟುಂಬ ಅದಕ್ಕಿಂತ ಮುಖ್ಯ. ಎಲ್ಲವನ್ನೂ ಬ್ಯಾಲೆನ್ಸ್ ಮಾಡಿ.
- ನಿಮ್ಮ ಮೆದುಳಿಗೆ ಕೆಲಸ ಕೊಡಿ, ಈ ವರ್ಷದಲ್ಲಿ ಒಂದೆರಡಾದ್ರೂ ಹೊಸತನ್ನು ಕಲಿಯುತ್ತೇನೆ ಎಂದು ಪಣತೊಡಿ ಹಾಗೇ ಮಾಡಿ.
- ಈ ಹೊಸವರ್ಷ ಎಲ್ಲರ ಜೀವನದಲ್ಲಿಯೂ ಶಾಂತಿ, ನೆಮ್ಮದಿ, ಆರೋಗ್ಯ, ಪ್ರೀತಿ, ಅದೃಷ್ಟ ತರಲಿ ಎಂದು ಆಶಿಸೋಣ..