ಹೊಸದಿಗಂತ ವರದಿ ದಾಂಡೇಲಿ :
ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕಚ್ಚಾ ವಸ್ತುಗಳನ್ನು ಹೇರಿಕೊಂಡು ಬರುವ ಗೂಡ್ಸ್ ರೈಲೊಂದು ಸರಿ ಸುಮಾರು ಎರಡುವರೆ ಗಂಟೆ ನಿಂತಲ್ಲೇ ನಿಂತು ಗೇಟ್ ಬಂದ್ ಮಾಡಿದ ಪರಿಣಾಮವಾಗಿ ಟ್ರಾಫಿಕ್ ಜಾಮ್ ಆಗಿ ಹಸನ್ಮಾಳಕ್ಕೆ ಹೋಗಲು ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಪ್ರವಾಸಿಗರು ಪರದಾಡಿದ ಘಟನೆ ಮಂಗಳವಾರ ನಡೆದಿದೆ.
ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕಚ್ಚಾ ವಸ್ತುಗಳನ್ನು ಹೇರಿಕೊಂಡು ಬರುವ ಗೂಡ್ಸ್ ರೈಲು ಹಸನ್ಮಾಳ ಕ್ರಾಸ್ ಹತ್ತಿರ ಸುಮಾರು ಎರಡುವರೆ ಗಂಟೆಗಳವರೆಗೆ ನಿಂತುಕೊಂಡ ಪರಿಣಾಮವಾಗಿ ಸ್ಥಳೀಯರಿಗೆ ತೀವ್ರ ತೊಂದರೆಯಾಯ್ತು. ನರ್ಸರಿ, ಎಲ್ಕೆಜಿ, ಯುಕೆಜಿ ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಸುಮಾರು ಎರಡುವರೆ ಗಂಟೆಗಳವರೆಗೆ ನಡು ರಸ್ತೆಯಲ್ಲಿ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಹೊರ ರಾಜ್ಯದಿಂದ ಪ್ರವಾಸಿಗರನ್ನು ಹೊತ್ತು ಬಂದಿದ್ದ ಬಸ್ ಸಹ ಜಾತಕ ಪಕ್ಷಿಯಂತೆ ಕಾಯುವಂತಾಯ್ತು. ಇನ್ನೂ ಹಸನ್ಳಾಳದಿಂದ ದಾಂಡೇಲಿಗೆ ಮತ್ತು ದಾಂಡೇಲಿಯಿಂದ ಹಸನ್ಮಾಳಕ್ಕೆ ಹೋಗುವಂತಹ ಸಾರ್ವಜನಿಕರು ಹಾಗೂ ಸ್ಥಳೀಯರು ತೀವ್ರ ಸಂಕಷ್ಟವನ್ನು ಎದುರಿಸಬೇಕಾಯಿತು.
ಸ್ಥಳೀಯ ಸಾಮಾಜಿಕ ಹೋರಾಟಗಾರರು ಹಾಗೂ ಪ್ರಗತಿಪರ ಕೃಷಿಕರಾದ ಜ್ಯೋತಿಬಾ ಪಾಟೀಲ್ ಅವರು ಈ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸಂಬಂಧಪಟ್ಟವರಿಗೆ ಮನವಿಯನ್ನು ಮಾಡಿದ್ದಾರೆ.



