ಸತ್ಯೇಂದ್ರನಾಥ್‌ ಬೋಸ್‌ರ ಸಾಧನೆಗೆ ಗೂಗಲ್‌ ಡೂಡಲ್ ಮೂಲಕ ಗೌರವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಪ್ರಸಿದ್ಧ ಗಣಿತಜ್ಞ ಹಾಗೂ ಭೌತ ಶಾಸ್ತ್ರಜ್ಞ ಸತ್ಯೇಂದ್ರನಾಥ್‌ ಬೋಸ್‌ ರ ಸಾಧನೆಯನ್ನು ಗೂಗಲ್‌ ಡೂಡಲ್‌ ಚಮತ್ಕಾರಿ ಚಿತ್ರದ ಮೂಲಕ ಸ್ಮರಿಸಲಾಗಿದೆ.

1924ರ ಜೂನ್‌ 4 (ಇದೇ ದಿನ)ದಂದು ಕ್ವಾಂಟಮ್‌ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ತಮ್ಮ ನೂತನ ಕ್ವಾಂಟಮ್‌ ಸೂತ್ರೀಕರಣಗಳನ್ನು ಸತ್ಯೇಂದ್ರನಾಥ್‌ ಬೋಸ್‌ ರು ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೀನ್‌ ಗೆ ಕಳುಹಿಸಿದ್ದರು. ಇದನ್ನು ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿನ ಪ್ರಮುಖ ಸಂಶೋಧನೆ ಎಂದು ಗುರುತಿಸಲಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಇಂದು ಗೌರವ ಸಲ್ಲಿಸಲಾಗಿದೆ.

1894ರಲ್ಲಿ ಕೊಲ್ಕತ್ತಾದಲ್ಲಿ ಜನಿಸಿದ ಬೋಸ್‌ರಿಗೆ ಅವರ ತಂದೆ ದಿನವೂ ಹೊಸ ಹೊಸ ಗಣಿತ ಸಮಸ್ಯೆಗಳನ್ನು ನೀಡಿ ಅವರ ಗಣಿತಾಸಕ್ತಿಯನ್ನು ಹೆಚ್ಚಿಸುತ್ತಿದ್ದರು. 15 ನೇ ವಯಸ್ಸಿನಲ್ಲಿ ಬೋಸ್ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆಡರು ಮತ್ತು ನಂತರದಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅನ್ವಯಿಕ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1917ರ ವೇಳೆಗೆ ಭೌತ ಶಾಸ್ತ್ರದ ಕುರಿತು ಉಪನ್ಯಾಸ ನೀಡಲು ಪ್ರಾರಂಭಿಸಿದ ಬೋಸ್‌ ಗಣಿತಶಾಸ್ತ್ರ ಮತ್ತು ಭೌತ ಶಾಸ್ತ್ರಗಳಿಗೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಅವರು ಭೌತ ಶಾಸ್ತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ. ಹಾಗೂ ವಿದ್ವಾಂಸರಿಗೆ ಕೊಡುವ ಅತ್ಯುನ್ನತ ಹುದ್ದೆಯಾದ ʼರಾಷ್ಟ್ರೀಯ ಪ್ರಾಧ್ಯಾಪಕʼ ಹುದ್ದೆ ನೀಡಿ ಗೌರವಿಸಲಾಗಿದೆ.

ಅವರ ನೆನಪಿನಲ್ಲಿ ಅವರ ಅಂಕಿಅಂಶಗಳಿಗೆ ಅನುಗುಣವಾಗಿರುವ ಯಾವುದೇ ಕಣವನ್ನು ಬೋಸಾನ್ ಎಂದು ಕರೆಯಲಾಗುತ್ತದೆ. ಅಲ್ಲದೇ ಬೋಸ್‌ ಅವರ ಆವಿಷ್ಕಾರವು ಕಣದ ವೇಗ ವರ್ಧಕ ಹಾಗೂ ದೇವಕಣದ ಆವಿಷ್ಕಾರ ಮುಂತಾದ ವೈಜ್ಞಾನಿಕ ಪ್ರಗತಿಗೆ ಕಾರಣವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!