ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ದಿವಂಗತ ನಟಿ ಶ್ರೀದೇವಿ ಅವರ 60ನೇ ಜನ್ಮದಿನವನ್ನು ವಿಶೇಷ ಡೂಡಲ್ ಮೂಲಕ ಗೂಗಲ್ ಗೌರವಿಸಿದೆ.
ಭಾರತೀಯ ಸಿನಿಮಾ ರಂಗದಲ್ಲಿ ನಾಲ್ಕು ದಶಕಗಳ ಅವಧಿಯಲ್ಲಿ ಸುಮಾರು 300 ಚಲನಚಿತ್ರಗಳಲ್ಲಿ ನಟಿಸಿದ ಕೀರ್ತಿ ಶ್ರೀದೇವಿಯವರಿಗಿದೆ. ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದ ಶ್ರೀದೇವಿಯವರು ಪುತ್ರಿಯರಾದ ಜಾನ್ವಿ ಮತ್ತು ಖುಷಿ ಕಪೂರ್ ಅವರನ್ನು ಅಗಲಿದ್ದಾರೆ. ಅವರು ಬದುಕಿದ್ದಿದ್ದರೆ ಇಂದಿಗೆ 60 ವರ್ಷ ಪೂರೈಸುತ್ತಿದ್ದರು. ಈ ವಿಶೇಷ ದಿನದಂದು ಗೂಗಲ್ ಡೂಡಲ್ ಮೂಲಕ ಗೌರವ ಸೂಚಿಸಿದೆ.
“ಕೇವಲ ನಾಲ್ಕು ವರ್ಷದವರಿದ್ದಾಗಲೇ ನಟನೆಯ ಗೀಳಿಗೆ ಅಂಟಿಕೊಂಡು ಬಾಲ ನಟಿಯಾಗಿ ತಮ್ಮ ಬಣ್ಣದ ಲೋಕದ ಪಯಣವನ್ನು ಆರಂಭಿಸಿದರು. ತಮಿಳಿನ ಕಂದನ್ ಕರುಣೈ ಅವರ ಮೊದಲ ಸಿನಿಮಾ. ನಟನೆಯ ಜತೆಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳನ್ನೂ ಸುಲಲಿತವಾಗಿ ಮಾತನಾಡಲು ಕಲಿತರು. ಆ ಒಂದು ಕಲಿಯುವಿಕೆಯೇ ಭಾರತದ ಇತರ ಚಿತ್ರರಂಗಕ್ಕೂ ಅವರನ್ನು ಬರಮಾಡಿಕೊಂಡಿತು” ಎಂದು ಗೂಗಲ್ ಬರೆದುಕೊಂಡಿದೆ.
ಕೈ ಬಳೆಯನ್ನು ತೋರಿಸುತ್ತ ಕಲರ್‌ಫುಲ್ ಬ್ಯಾಕ್‌ಗ್ರೌಂಡ್‌ನಲ್ಲಿ ಮೂಡಿಬಂದಿರುವ ಶ್ರೀದೇವಿಯ ಈ ಡೂಡಲ್ ವಿನ್ಯಾಸ ಮಾಡಿದ್ದು, ಮುಂಬೈ ಮೂಲದ ಭೂಮಿಕಾ ಮುಖರ್ಜಿ. ಕಲಾ ಬದುಕಿಗೆ ಶ್ರೀದೇವಿಯ ಕೊಡುಗೆ ಎಂಥದ್ದು ಎಂಬುದನ್ನು ಈ ಡೂಡಲ್ ಮೂಲಕ ತೋರಿಸಿದ್ದಾರೆ.