ಒಳ‌ಮೀಸಲಾತಿಗೆ ಸರಕಾರದ ಸಹಮತ: ಸಚಿವ ಕೋಟ‌

ಹೊಸದಿಗಂತ ವರದಿ,ಮಡಿಕೇರಿ:

ಒಳಮೀಸಲಾತಿ ಪ್ರಸ್ತಾವಕ್ಕೆ ಸರ್ಕಾರದ ಸಹಮತ ಇದೆ ಎಂದು ತಿಳಿಸಿದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಆದಷ್ಟು ಬೇಗ ಈ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ನುಡಿದರು.

ಕೊಡವ ಭಾಷೆಯನ್ನಾಡುವ 18 ಸಮುದಾಯಗಳನ್ನೊಳಗೊಂಡ ಕೊಡವ ಭಾಷಿಕ ಸಮುದಾಯಗಳ ಕೂಟದ ವತಿಯಿಂದ ವೀರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾಮದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಒತ್ತೋರ್ಮೆ ಕೂಟ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ 101 ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸಬೇಕೆಂದು ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರದ ಸಹಮತ ಇದೆ. ಸದಾಶಿವ ಆಯೋಗ ವರದಿ ಜಾರಿ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಧ್ವನಿ ಇಲ್ಲದವರಿಗೆ ಧ್ವನಿ ನೀಡಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಸಚಿವರು ನುಡಿದರು.

ಕೊಡಗು ಜಿಲ್ಲೆಯಲ್ಲಿ ಕೊಡವ ಭಾಷೆ ಮಾತನಾಡುವ 18 ಸಣ್ಣ ಸಣ್ಣ ಸಮಾಜಗಳು ಇದ್ದು, ಈ ಸಮಾಜಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿ ಸಚಿವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಒಳ ಮೀಸಲಾತಿ ಎಂಬುದು ಮತ್ತಷ್ಟು ಜಟಿಲ ಸಮಸ್ಯೆ ಆಗುತ್ತಿದೆ. ಆದರೂ ಸರ್ಕಾರದ ಸೌಲಭ್ಯಗಳು ಇದುವರೆಗೆ ಯಾರಿಗೆ ತಲುಪಿಲ್ಲವೋ ಅಂತಹ ಕಟ್ಟ ಕಡೆಯ ಸಮಾಜಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಮತ್ತು ಧ್ವನಿ ಇಲ್ಲದವರಿಗೆ ಧ್ವನಿ ನೀಡಬೇಕೆಂಬುದೇ ಪ್ರಸ್ತುತ ಸರ್ಕಾರದ ಉದ್ದೇಶವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕುಲಶಾಸ್ತ್ರ ಅಧ್ಯಯನಕ್ಕೆ 25ಲಕ್ಷ ರೂ.: ಕೊಡವ ಭಾಷಿಕರ ಎಲ್ಲಾ ಸಮಾಜಗಳ ಕುರಿತು ಕುಲಶಾಸ್ತ್ರ ಅಧ್ಯಯನ ಮಾಡಲು 25 ಲಕ್ಷ ರೂ ಬಿಡುಗಡೆ ಮಾಡಲಾಗುವುದು. ಆ ನಿಟ್ಟಿನಲ್ಲಿ ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆ ಅಥವಾ ಹಂಪಿ ವಿಶ್ವವಿದ್ಯಾನಿಯಕ್ಕೆ ಅಧ್ಯಯನದ ಹೊಣೆ ವಹಿಸಲಾಗುವುದು ಎಂದು ತಿಳಿಸಿದರು.

ಐನ್’ಮನೆಗಳ ಅಭಿವೃದ್ಧಿಗೆ 5 ಕೋಟಿ: ಕೊಡಗಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿಬಿಂಬಿಸುವಲ್ಲಿ ಐನ್‍ಮನೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದು,, ಆ ದಿಸೆಯಲ್ಲಿ ಐನ್‍ಮನೆಗಳ ಅಭಿವೃದ್ಧಿಗೆ 5 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಇದೇ ಸಂದರ್ಭ ಘೋಷಿಸಿದರು..

ಭಾಷೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿ, ತೆರೆಮರೆಯಲ್ಲಿ ಇರುವ ಗ್ರಾಮೀಣ ಪ್ರದೇಶದವರನ್ನು ಗುರುತಿಸಿ ಪದ್ಮಶ್ರೀಯಂತಹ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ನೀಡುತ್ತಿದೆ ಆಡಳಿತ ವ್ಯವಸ್ಥೆ ಎಷ್ಟು ಬದಲಾವಣೆ ಆಗಿದೆ ಎಂಬುದನ್ನು ಇದು ಸಾರುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!