ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಊರು ಕೆದಿಲ ಈಗ ದೇಶದ ಗಮನ ಸೆಳೆದಿದೆ. ಇಲ್ಲಿನ ಪುಟ್ಟ ಹಳ್ಳಿ ಪ್ರದೇಶವೊಂದರಲ್ಲಿ ಸಣ್ಣದಾಗಿ ಅರಳಿನಿಂತ ಹಾರ್ದಿಕ್ ಹರ್ಬಲ್ಸ್ ಸಂಸ್ಥೆ, ತನ್ನ ‘ಸತ್ವಮ್ ಕೊಕೋರೇಕಾ ಹರ್ಬಲ್ ಬಾಥಿಂಗ್ ಸೋಪ್’ಗೆ ಭಾರತ ಸರ್ಕಾರದಿಂದ ಪೇಟೆಂಟ್ ಪಡೆದುಕೊಂಡಿದ್ದು, ಈ ಮೂಲಕ ಮುಡಿಗೆ ಮತ್ತೊಂದು ಗರಿ ಮುಡಿಸಿಕೊಂಡಿದೆ.
ವಿಶೇಷವೆಂದರೆ ಈ ಸೋಪ್‌ಗೆ ಮೂಲ ಪದಾರ್ಥವೇ ಅಡಿಕೆ ಸಿಪ್ಪೆರಸ!
ಕಂಪನಿ ಆರಂಭಿಸಬೇಕು ಎನ್ನುವುದು ದೊಡ್ಡ ಯೋಚನೆ, ಅದರಲ್ಲೂ ತಮ್ಮ ಸುತ್ತಮುತ್ತಲೇ ಇರುವ ವಸ್ತುಗಳನ್ನು ಬಳಸಿ ಬ್ರ್ಯಾಂಡ್ ಒಂದನ್ನು ಕಟ್ಟಬೇಕು ಎನ್ನುವುದು ಬಹುತೇಕರ ಕನಸು. ಅಂತದ್ದೇ ಕನಸು ಕಂಡಿದ್ದ ಹಾರ್ದಿಕ್ ಹರ್ಬಲ್ಸ್ ಈಗ ಅದನ್ನು ನನಸು ಮಾಡಿಕೊಂಡಿದೆ.
ಏನೀ ಸಾಬೂನಿನ ವೈಶಿಷ್ಟ್ಯತೆ?
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಕೆದಿಲದಲ್ಲಿರುವ ಹಾರ್ದಿಕ್ ಹರ್ಬಲ್ಸ್, ತನ್ನ ಸತ್ವಮ್ ಬ್ರಾಂಡ್‌ನ ಮೂಲಕ ಸತ್ವಮ್ ಕೊಕೋರೇಕಾ ಹರ್ಬಲ್ ಬಾಥಿಂಗ್ ಸೋಪ್ ತಯಾರಿಸುತ್ತಿದೆ. ಅಡಿಕೆ ಸಿಪ್ಪೆಯ ರಸ, ತೆಂಗಿನ ಎಣ್ಣೆ, ಅಲೋವೆರಾ, ಸಾಗುವಾನಿ ಎಲೆ, ಅರಿಶಿನ ಎಣ್ಣೆ, ಕೊತ್ತಂಬರಿ ಮತ್ತು ಲಾವಂಚದಂತಹ ಪ್ರಮುಖ ಗಿಡಮೂಲಿಕೆಗಳಿಂದ ತಯಾರಿಸಲ್ಪಡುವ ಈ ಸಾಬೂನು ತ್ವಚೆಯ ರಕ್ಷಣೆ, ತ್ವಚೆ ಬಲಪಡಿಸಿ, ಸುಕ್ಕುಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದ್ದು, ಇದು ಮಾಯಿಶ್ಚರೈಸರ್ ಆಗಿ ಕೂಡಾ ಕಾರ್ಯನಿರ್ವಹಿದುತ್ತದೆ. ಜೊತೆಗೆ ಇದು ವೈಟ್ ಪ್ಯಾಚ್ ಅಥವಾ ಬಿಳಿ ಮಚ್ಚೆ (ಸಿಬ್ಬ) ನಿವಾರಣೆಗೂ ಸಹಾಯಕವಾಗಿದೆ. ಇನ್ನು ಮೈಯ ತುರಿಕೆ ನಿವಾರಿಸಿ, ಗಾಯಗಳನ್ನು ತ್ವರಿತವಾಗಿ ಗುಣಪಡಿಸುವಲ್ಲೂ ಸಾಬೂನು ಸಹಕರಿಸುತ್ತದೆ. ಈ ಉತ್ಪನ್ನವು ಚರ್ಮದ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ ಸುಸ್ಥಿರತೆ ಕಾಯ್ದುಕೊಳ್ಳಲು ನೆರವಾಗುತ್ತದೆ ಎನ್ನುತ್ತದೆ ಸಂಸ್ಥೆ.
ಮುಂದಿನ 20 ವರ್ಷಗಳಿಗೆ ಹಕ್ಕುಸ್ವಾಮ್ಯ
ಕಳೆದ 2021ರ ನವೆಂಬರ್‌ನಲ್ಲಿ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕ್ರಿಯೆ ಅನೇಕ ಹಂತಗಳನ್ನು ದಾಟಿ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರದ ಅನುಮೋದನೆ ಪಡೆದು, ಕೇಂದ್ರ ಸರ್ಕಾರದಿಂದ ಸೆ.೧೩ರಂದು ಅಧಿಕೃತವಾಗಿ ಪೇಟೆಂಟ್ ಪಡೆದುಕೊಂಡಿದೆ. ಇದರೊಂದಿಗೆ ಈ ವಿಶೇಷ ಉತ್ಪನ್ನದ ಹಕ್ಕುಸ್ವಾಮ್ಯವನ್ನು ಮುಂದಿನ 20 ವರ್ಷಗಳಿಗೆ ಹಾರ್ದಿಕ್ ಹರ್ಬಲ್ಸ್ ಕಾಯ್ದಿರಿಸಿಕೊಂಡಿದೆ.
ಸೋಪ್‌ಗೆ ಪೇಟೆಂಟ್ ಸಿಕ್ಕಿರುವುದು ಬರೀ ಕಂಪನಿಗಷ್ಟೇ ಅಲ್ಲ, ವಿವಿಧ ಸವಾಲುಗಳ ನಡುವೆ ಅಡಿಕೆ ಕೃಷಿ ಮಾಡುತ್ತಿರುವ ಕರಾವಳಿ, ಮಲೆನಾಡು ಭಾಗದ ಬೆಳೆಗಾರರಿಗೆ ಕೂಡಾ ಮತ್ತಷ್ಟು ಹರ್ಷ ತಂದಿದೆ.