ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲು ಹೊರಡಿಸಿರುವ ವಿಶೇಷ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ವ್ಯಾಪಕ ವಿರೋಧ
ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಬಳಸಲು ಹೊರಡಿಸಿರುವ ವಿಧೇಯಕಕ್ಕೆ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನೂ ಓದಿ:
ಈ ಕುರಿತು ಮಾಹಿತಿ ನೀಡಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕಳೆದ ಅಧಿವೇಶನದಲ್ಲಿ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ಬಿಲ್‌ನ್ನು ಮಂಡಿಸಲಾಗಿತ್ತು. ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸುವ ಉದ್ದೇಶದಿಂದ ಈ ಮಸೂದೆ ತರಲಾಗಿತ್ತು ಎಂದು ತಿಳಿಸಿದ್ದಾರೆ. ಆದರೆ, ಪ್ರತಿಪಕ್ಷಗಳು ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸದೆ ರಾಜಕೀಯ ಕಾರಣಗಳಿಗಾಗಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಿವೆ ಎಂದು ಆರೋಪಿಸಿದ್ದಾರೆ.
ಸಂಪುಟದ ನಿರ್ಧಾರದಂತೆ ಮಸೂದೆಯನ್ನು ಹಿಂಪಡೆದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು. ರಾಜ್ಯಪಾಲರಿಗೆ ಕೂಡ ಈ ಕುರಿತು ಮಾಹಿತಿ ನೀಡಲಾಗುವುದು. ಬಳಿಕ ಮುಂದಿನ ಅಧಿವೇಶನದಲ್ಲಿ ಮತ್ತೆ ಮಸೂದೆ ಮಂಡಿಸುವ ಉದ್ದೇಶವಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.



