ಹೊಸದಿಗಂತ ವರದಿ ತುಮಕೂರು:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆಯುವ ಮೂಲಕ ರಾಜ್ಯ ಸಚಿವಸಂಪುಟ ರಾಜ್ಯದ ಜನತೆ ಮುಂದೆ ಬೆತ್ತಲಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ತುಮಕೂರು ನಗರದಲ್ಲಿ ದಿಶಾ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಕ್ಟ್ ಮತ್ತು ಸೆಕ್ಷನ್ ಬಗ್ಗೆ ಮಾತನಾಡುತ್ತಾರೆ. ಅಂದು ಸಿಬಿಐ ನವರು ಅನುಮತಿ ಕೇಳಿದ್ರು, ಸರ್ಕಾರ ಅನುಮತಿ ನೀಡಿತ್ತು. ಅಲ್ಲದೆ ಉಪಮುಖ್ಯಮಂತ್ರಿಗಳು ನ್ಯಾಯಾಲಯಗಳಿಗೆ ಓಡಾಡಿದ್ದಾರೆ.
ಅವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ತೀರ್ಪಾಗಲಿ. ನ್ಯಾಯಾಲಯದ ಮುಂದೆಯೇ ಕ್ಲೀನ್ ಚೀಟ್ ಪಡೆದು ಜನರ ಮುಂದೆ ಹೋಗಬೇಕಿತ್ತು. ಇದೊಂದು ನ್ಯಾಯಾಲಯಕ್ಕೆ ಸವಾಲ್ ಹಾಕಿದ ರೀತಿಯಲ್ಲಿದೆ ಎಂದು ಹೇಳಿದರು.
ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್ ಹಾಕಿದಂತಿದೆ. ಇಂತಹ ಪ್ರಕರಣಗಳನ್ನು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುವುದು ಸೂಕ್ತವಾಗಿರಲಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಖಂಡಿಸುತ್ತೇನೆ. ಒಂದು ಸಲ ಎಫ್ಐಆರ್ ಆದ್ಮೇಲೆ ಚಾರ್ಜ್ ಶೀಟ್ ಕೊಟ್ಟರೆ ಬದಲಾವಣೆ ಮಾಡಲು ನ್ಯಾಯಾಧೀಶರ ಅನುಮತಿ ಪಡೆಯಬೇಕು. ಪ್ರಕರಣಗಳು ಒಂದು ಸಲ ಕೋರ್ಟ್ ಗೆ ಹೋದ್ರೆ ನ್ಯಾಯಾಧೀಶರೇ ತೀರ್ಮಾನ ತೆಗೆದುಕೊಳ್ಳಬೇಕು. ಕ್ಯಾಬಿನೆಟ್ ಗೆ ಯಾವುದೇ ಅಧಿಕಾರ ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.
ಜಾತಿ ಗಣತಿ ವಿಚಾರ ಮಾತನಾಡಿ, ಜಾತಿ ಗಣತಿ ವರದಿ ಅವಶ್ಯಕತೆಯಿದೆ. ಜನಗಣತಿ 2011ರಲ್ಲಿ ನಡೆದಿದೆ, ಬಳಿಕ ಈವರೆಗೆ ಆಗಿಲ್ಲ. ಯಾವುದೇ ಪಂಚವಾರ್ಷಿಕ ಯೋಜನೆಗಳ ಜಾರಿಗೆ ಜನಸಮುದಾಯಗಳ ಸಾಮಾಜಿಕ, ಅರ್ಥಿಕ ಮಾಹಿತಿ ಅತ್ಯವಶ್ಯಕ ಎಂದು ಸಚಿವ ಎ ನಾರಾಯಣ ಸ್ವಾಮಿ ಜಾತಿ ಗಣತಿ ವರದಿಯನ್ನು ಸಮರ್ಥಿಸಿಕೊಂಡರು.
ಪ್ರತಿ ಐದು ವರ್ಷಕ್ಕೊಮ್ಮೆ ಜಾತಿಗಣತಿ ವರದಿ ಆಗಬೇಕು ಎಂದ ಸಚಿವರು, ವರದಿ ನಾಪತ್ತೆ ವಿಚಾರ ಕುರಿತಾಗಿ ಎಲ್ಲಿ ನಾಪತ್ತೆ ಆಯ್ತು ತನಿಖೆ ಆಗಬೇಕಿತ್ತು. ಆದರೆ, ತನಿಖೆ ಮಾಡದೆ ಜನರ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ ಎಂದು ಹೇಳಿದರು.
ಒಳ ಮೀಸಲಾತಿ ಕುರಿತು ಎ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿ, ಒಳ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಬದ್ದ. ಪ್ರಧಾನಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ಒಲವು ತೋರಿಸಿದ್ದಾರೆ. ಸುಪ್ರಿಂ ಕೋರ್ಟ್ ಸಹ ಫೆಬ್ರವರಿಯಲ್ಲಿ ಈ ಬಗ್ಗೆ ತೀರ್ಪು ನೀಡಲಿದೆ ಎಂದು ಹೇಳಿದರು.