ರಾಜ್ಯದಲ್ಲಿ ಸರ್ಕಾರ ಜೀವಂತವಿಲ್ಲ: ಶಾಸಕ ಪ್ರಿಯಾಂಕ್ ಖರ್ಗೆ

ಹೊಸದಿಗಂತ ವರದಿ, ಕಲಬುರಗಿ:

ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಮೂಕ ಬಸವಣ್ಣ ಆಗಿದ್ದಾರೆ. ಹಾಗಾಗಿ, ಭಜರಂಗದಳ ಸರ್ಕಾರಕ್ಕೆ ನಿರ್ದೇಶನ ನೀಡುತ್ತಿದೆ. ಇವರನ್ನು ನಿಯಂತ್ರಿಸಲಾಗುತ್ತಿಲ್ಲವೇಕೆ? ಎಂದು ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.

ಹಿಜಾಬ್, ಹಲಾಲ್ ನಂತರ ಈಗ ಮಸೀದಿಗಳ ಮೇಲಿನ ಮೈಕ್ ಗಳ ತೆರವಿಗೆ ಹಿಂದೂ ಪರ ಸಂಘಗಳು ಒತ್ತಾಯಿಸುತ್ತಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಸೀದಿಗಳ ಮೇಲಿನ ಮೈಕ್ ಬಳಕೆಗೆ ವಾಯುವ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸುಪ್ರಿಂ ಕೋರ್ಟ್ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಇದು ಮಂದಿರ ಹಾಗೂ ಚರ್ಚುಗಳಿಗೂ ಕೂಡಾ ಅನ್ವಯಿಸುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಸರ್ಕಾರ ಜಾರಿಗೆ ತರಲಿ. ಆದರೆ ಈ ವಿಚಾರವನ್ನು ಮುಂದಿಟ್ಟುಕೊಂಡು ಭಜರಂಗದಳ ಮಾತನಾಡುತ್ತಿದೆ. ಎಲ್ಲವನ್ನೂ ಮಾತನಾಡಲು ಇವರು ಯಾರು ? ಯಾರು ಹಲಾಲ್ ಸರ್ಟಿಫಿಕೇಟ್ ತಗೊಂಡಿಲ್ಲ ಹೇಳಿ? ಅಂಬಾನಿ ತಗೊಂಡಿಲ್ವಾ? ಅದು ವ್ಯಾಪಾರ ಅದರ ಪಾಡಿಗೆ ಬಿಟ್ಟುಬಿಡಲಿ. ಪೆಟ್ರೋಲ್ ಡಿಸೇಲ್ ದರ ಗಗನಕ್ಕೇರಿದೆ. ಅಡುಗೆ ಅನಿಲ ಬೆಲೆ ರೂ ಒಂದು ಸಾವಿರ ದಾಟಿದೆ. ಸಿರಸಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ ರೂ 111 ಆಗಿದೆ. ಸಿಎಂ ಎಲ್ಲಿದ್ದಾರೆ? ಸರ್ಕಾರ ಎಲ್ಲಿದೆ ? ಅದರ ಬಗ್ಗೆ ಮಾತನಾಡಲಿ ನೋಡೋಣ? ಬಿಜೆಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ದೇಶಗಳಿಂದ ಆಮದಾಗುತ್ತಿರುವ ಪೆಟ್ರೋಲ್ ಡಿಸೇಲ್ ಹಾಕಿಸಿಕೊಳ್ಳುವುದನ್ನ ನಿಲ್ಲಿಸುವ ಮೂಲಕ ನೈಜ ಹಿಂದುತ್ವವನ್ನು ಮೆರೆಯಲಿ ಎಂದು ಸವಾಲು ಎಸೆದು, ಸಿಎಂ ಬಸಣ್ಣ ಮೂಕರಾಗಿರುವುದಕ್ಕೆ ಇದೆಲ್ಲಾ ನಡೆಯುತ್ತಿದೆ ಎಂದು ಪುನರುಚ್ಚರಿಸಿದರು.

ಕಾಂಗ್ರೆಸ್ ಪಕ್ಷ ಸಾಫ್ಟ್ ಹಿಂದುತ್ವ ಪಾಲಿಸುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿರುವ ಕುರಿತು ಪ್ರಶ್ನೆ ಕೇಳಿದಾಗ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಸಾಫ್ಟ್ ಹಿಂದುತ್ವ ಅಥವಾ ಸ್ಟ್ರಾಂಗ್ ಸೆಕ್ಯುಲರಿಸಂ ಅಂತ ಇಲ್ಲ ಸಂವಿಧಾನಬದ್ಧ ಹಕ್ಕನ್ನು ಜನರಿಗೆ ತಲುಪಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಲೇ ಬಂದಿದೆ ಹಾಗೆ ಮುಂದುವರೆಸುತ್ತದೆ ಎಂದರು.

ಮೊಟ್ಟ ಮೊದಲಬಾರಿಗೆ ಸಚಿವ ಈಶ್ವರಪ್ಪ ಒಳ್ಳೆ ಮಾತನ್ನ ಹೇಳಿದ್ದಾರೆ ಎಲ್ಲ ಧರ್ಮದ ಗುರುಗಳನ್ನು ಕರೆದು ಮಾತನಾಡಲಿ ಎಂದಿದ್ದಾರೆ ಅದನ್ನು ಸರ್ಕಾರ ಮಾಡಲಿ ಅದು ವಿರೋಧಪಕ್ಷದ ಜವಾಬ್ದಾರಿಯಲ್ಲ ಎಂದು ಸರ್ಕಾರವನ್ನು ಛೇಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!