ಹೊಸದಿಗಂತ ವರದಿ ಬೆಳಗಾವಿ:
ಮಹಾತ್ಮಾ ಗಾಂಧಿ ಜಯಂತಿಯ ದಿನ ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿರುವ ಗುಂಡು ತುಂಡಿನ ಪಾರ್ಟಿ ಇಲಾಖೆಯ ಮಾನ ಹರಾಜು ಹಾಕಿದೆ.
ಇಲ್ಲಿನ ವ್ಯಾಕ್ಸಿನ್ ಡಿಪೋ ಬಳಿ ಇರುವ ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಸಿಬ್ಬಂದಿಗಳು ಗಾಂಧಿ ಜಯಂತಿ ದಿನದಂದು ಗುಂಡಿನ ಪಾರ್ಟಿ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಮಾಧ್ಯಮದವರು ಸಂಪರ್ಕಿಸಿದಾಗ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಗಾಂಧಿ ಜಯಂತಿ ದಿನದಂದು ಜಿಲ್ಲಾಡಳಿತ ಮದ್ಯ, ಮಾಂಸ ಮಾರಾಟ ನಿಷೇಧ ಮಾಡಿರುತ್ತದೆ. ಆದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುಂಡು, ತುಂಡು ಪಾರ್ಟಿ ಮಾಡಿರುವುದು ಗಮನಾರ್ಹ.
ಟಿಳಕವಾಡಿಯಲ್ಲಿರುವ ಡಿಎಚ್ಓ ಕಚೇರಿ ಹಿಂಭಾಗದ ಕೊಠಡಿಯಲ್ಲಿ ಡಿಎಚ್ಓ ಕಚೇರಿಯ ಸಿಬ್ಬಂದಿಗಳು ಎಣ್ಣೆ ಪಾರ್ಟಿ ಮಾಡಿದ್ದು, ಗಾಂಧಿ ಫೋಟೋ ಎದುರೇ ಕುಡಿದು, ಕುಣಿದು ಕುಪ್ಪಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.