ಸರ್ಕಾರದ ಯೋಜನೆ ಶೇ.100ರಷ್ಟು ಜನತೆಗೆ ತಲುಪಿದಾಗ ಓಲೈಕೆ ರಾಜಕೀಯ ಅಂತ್ಯ: ಪ್ರಧಾನಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರದ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜನತೆಗೆ ತಲುಪುವಂತಾದಾಗ ಓಲೈಕೆ ರಾಜಕಾರಣ ಕೊನೆಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.
ಅವರು ಗುಜರಾತ್‌ನ ಭರೂಚ್ ನಗರದಲ್ಲಿ ನಡೆದ ‘ಉತ್ಕರ್ಷ್ ಸಮಾರೋಹ್’ ನಲ್ಲಿ ವರ್ಚುವಲ್ ಮೂಲಕ ಮಾತನಾಡಿ, ಸರ್ಕಾರದ ಯೋಜನೆಗಳು ಶೇ.100ರಷ್ಟು ಫಲಾನುಭವಿಗಳಿಗೆ ತಲುಪಿದಾಗ ಸಹಜವಾಗಿಯೇ ತಾರತಮ್ಯ ಅಂತ್ಯಗೊಳ್ಳುತ್ತದೆ. ಅಲ್ಲದೆ ನಾವು ಇಂತಹ ಪ್ರಗತಿ ಸಾಸಿದ್ದೇ ಆದರೆ ಮುಂದೆ ಸರಕಾರದ ಯೋಜನೆಯ ಪ್ರಯೋಜನ ಪಡೆಯಲು ಯಾವುದೇ ಶಿಫಾರಸಿನ ಅಗತ್ಯವೂ ಇರುವುದಿಲ್ಲ. ಆಗ ಓಲೈಕೆ ರಾಜಕೀಯ ಕೂಡಾ ಕೊನೆಗೊಳ್ಳುತ್ತದೆ ಎಂಬುದಾಗಿ ಅವರು ವಿವರಿಸಿದರು.
ಸರಕಾರ ಜನರ ಕಲ್ಯಾಣಕ್ಕಾಗಿ ರೂಪಿಸುವ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ  ಕೊರತೆಯಿಂದ ಅವು ಕಾಗದದಲ್ಲಿ ಉಳಿಯುವಂತಾಗುತ್ತವೆ ಇಲ್ಲವೇ ಅಂತಹ ಯೋಜನೆಗಳಿಂದ ಅರ್ಹರಲ್ಲದವರು ಪ್ರಯೋಜನ ಪಡೆಯುವಂತಾಗುತ್ತದೆ. ಇಂತಹ ಸಂದರ್ಭ  ಅಗತ್ಯವಿರುವವರಿಗೆ ಸಕಾಲಿಕ ಆರ್ಥಿಕ ನೆರವು ನೀಡಲು ಜಿಲ್ಲೆಗೆ ಸಹಾಯ ಮಾಡುವ ನಾಲ್ಕು ಪ್ರಮುಖ ರಾಜ್ಯ ಸರ್ಕಾರಿ ಯೋಜನೆಗಳಲ್ಲಿ ಭರೂಚ್ ಶೇ. 100 ರಷ್ಟು ಪ್ರಗತಿ ಸಾಧಿಸಿದ ಜಿಲ್ಲೆಯಾಗಿರುವುದು ಶ್ಲಾಘನೀಯ ಸಂಗತಿ ಎಂಬುದಾಗಿ ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗುಜರಾತಿನ ಈ ಜಿಲ್ಲೆಯಲ್ಲಿ ಜಿಲ್ಲಾಡಳಿತವು, ಜನವರಿ 1 ರಿಂದ ಮಾರ್ಚ್ 31 ರವರೆಗೆ ಕೈಗೊಂಡ ‘ಉತ್ಕರ್ಷ್ ಇನಿಶಿಯೇಟಿವ್’ ಉಪಕ್ರಮವು ವಿಧವೆಯರು, ವೃದ್ಧರು ಮತ್ತು ನಿರ್ಗತಿಕ ನಾಗರಿಕರಿಗೆ ನೆರವು ನೀಡುವ ಯೋಜನೆ ಪೂರ್ಣವಾಗಿ ಫಲಾನುಭವಿಗಳಿಗೆ ತಲುಪುವಂತಾಗಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದು, ಇದೀಗ ಆ ಗುರಿಯನ್ನು ಸಾಧಿಸಿ ಗಮನ ಸೆಳೆದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!