ಜಾನುವಾರುಗಳ ಆರೋಗ್ಯ ರಕ್ಷಣೆಗೆ ‘ಪಶು ಸಂಜೀವಿನಿ’

ಹೊಸ ದಿಗಂತ ವರದಿ, ಚಿತ್ರದುರ್ಗ:

ರೈತರು ಜಾನುವಾರುಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಕೃಷಿ ಚಟುವಟಿಕೆ ನಡೆಸುವಲ್ಲಿ ಜಾನುವಾರುಗಳು ರೈತನ ಬದುಕಿನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಹೀಗೆ ಅತ್ಯಂತ ಜತನದಿಂದ ಸಾಕಿದ ಜಾನುವಾರುಗಳು ಕಾಯಿಲೆ ಅಥವಾ ಅಪಘಾತ ಸೇರಿದಂತೆ ವಿವಿಧ ಕಾರಣಗಳಿಂದ ಮೃತಪಟ್ಟಲ್ಲಿ ರೈತರಿಗೆ ಉಂಟಾಗುವ ನೋವು ಹೇಳತೀರದು. ಜೊತೆಗೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ರೈತರ ಜಾನುವಾರುಗಳಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ’ಪಶು ಸಂಜೀವಿನಿ’ ಎಂಬ ಯೋಜನೆ ಜಾರಿ ಮಾಡಿದೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಯೋಜನೆ ಜಾರಿ ಮಾಡಲಾಗಿತ್ತಿದೆ. ಪ್ರತಿ  1 ಲಕ್ಷ ಜಾನುವಾರುಗಳಿರುವ ನಿಗದಿತ ಅಲ್ಲಿನ ಜನರ ಜಾನುವಾರುಗಳ ಹಿತದೃಷ್ಠಿಯಿಂದ ಈ ಯೊಜನೆಯಡಿ ಒಂದು ವಾಹನ ನೀಡಲಾಗುತ್ತದೆ. ಆ ಪ್ರದೇಶದಲ್ಲಿನ ಯಾವುದೇ ಜಾನುವಾರುಗಳಿಗೆ ಕಾಯಿಲೆ, ಅಪಘಾತ ಮತ್ತಿತರ ಯಾವುದೇ ಅನಾರೋಗ್ಯ ಸಮಸ್ಯೆಯಾದಲ್ಲಿ ಅವುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ರೈತರು ಸೇರಿದಂತೆ ಜಾನುವಾರುಗಳನ್ನು ಸಾಕಿದವರು ತಮ್ಮ ಜಾನುವಾರುಗಳಿಗೆ ಉಚಿತ ಆರೋಗ್ಯ ಸೇವೆ ಪಡೆಯಬಹುದು.
ಯಾವುದೇ ಜಾನುವಾರುಗಳಿಗೆ ಕಾಯಿಲೆ, ಅಪಘಾತ ಮತ್ತಿತರ ಕಾರಣಗಳಿಂದ ಅನಾರೋಗ್ಯ ಉಂಟಾದಲ್ಲಿ 1962 ಟೋಪ್ ಫ್ರೀ ಸಂಖ್ಯೆಗೆ ದೂರವಾಣಿ ಕರೆ ಮಾಡಬಹುದು. ಆ ಮೂಲಕ ತೊಂದರೆ ಉಂಟಾಗಿರುವ ಜಾನುವಾರು ಅಥವಾ ರಾಸುಗಳ ಬಗ್ಗೆ ಮಾಹಿತಿ ಹಾಗೂ ಸ್ಥಳದ ವಿವರ ನೀಡಿದಲ್ಲಿ ಪಶು ವೈದ್ಯರು ಆ ಸ್ಥಳಕ್ಕೆ ವಾಹನ ಸಮೇತ ಆಗಮಿಸುತ್ತಾರೆ. ಹೀಗೆ ಬಂದವರು ತೊಂದರೆಗೀಡಾಗಿರುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಇದಕ್ಕೆ ರೈತರು ಜಾನುವಾರು ಮಾಲೀಕರು ಯಾವುದೇ ಶುಲ್ಕ ನೀಡಬೇಕಿಲ್ಲ. ಸಂಪೂರ್ಣ ಉಚಿತ ಸೇವೆ ನೀಡಲಾಗುತ್ತದೆ.
ಜಾನುವಾರುಗಳಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಪಶು ಸಂಗೋಪನಾ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಜಾನುವಾರುಗಳಿಗೆ ಬರುವ ಅನಾರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಉಚಿತ ಸೇವೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ರೋಗ ಬಂದ ಜಾನುವಾರುಗಳನ್ನು ರೈತರು ಪಶು ಆಸ್ಪತ್ರೆಗಳಿಗೆ ಕರೆತರಬೇಕು. ಒಂದೆರಡು ರಾಸುಗಳಿಗೆ ತೊಂದರೆಯಾದಲ್ಲಿ ಪಶು ಆಸ್ಪತ್ರೆಗೆ ಕರೆತರಬಹುದು. ಹಲವು ರಾಸುಗಳಿಗೆ ರೋಗದ ಸಮಸ್ಯೆ ಆದಲ್ಲಿ ಅವನ್ನು ಕರೆತರಲು ರೈತರಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ.
ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲೂ ಪಶು ಸಂಜೀವಿನಿ ಯೋಜನೆ ಜಾರಿ ಮಾಡಲು ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲೆಯ ಆರು ತಾಲ್ಲೂಕುಗಳಾದ ಚಳ್ಳಕೆರೆ – 6, ಹಿರಿಯೂರು – 5, ಹೊಸದುರ್ಗ – 3, ಹೊಳ್ಳಲ್ಕೆರೆ – 2 ಚಿತ್ರದುರ್ಗ -2 ಹಾಗೂ ಮೊಳಕಾಲ್ಮುರು – 2 ವಾಹನಗಳನ್ನು ಮುಂಜೂರು ಮಾಡಲಾಗಿದೆ. ಜಿಲ್ಲೆಗೆ ಒಟ್ಟು 20 ವಾಹನಗಳನ್ನು ರಾಜ್ಯ ಸರ್ಕಾರ ಮುಂಜೂರು ಮಾಡಿದೆ. ಇದರಲ್ಲಿ ಈಗಾಗಲೇ 10 ವಾಹನಗಳು ಜಿಲ್ಲೆಗೆ ಬಂದಿವೆ. ಚಳ್ಳಕೆರೆ – 3, ಹಿರಿಯೂರು – 2, ಹೊಸದುರ್ಗ – 2, ಹೊಳ್ಳಲ್ಕೆರೆ -2 ಚಿತ್ರದುರ್ಗ – 1 ಹಾಗೂ ಮೊಳಕಾಲ್ಮುರು – 1 ವಾಹನಗಳನ್ನು ವಿತರಿಸಲಾಗಿದೆ.
ಸರ್ಕಾರ ಈ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಒದಗಿಸುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಪ್ರಕ್ರಿಯೆ ಮುಗಿದ ನಂತರ ವಾಹನಗಳು ಸೇವೆ ಆರಂಭಿಸಲಿವೆ. ಇದರಲ್ಲಿ ಒಬ್ಬ ಪಶುವೈದ್ಯ, ಸಹಾಯಕ ಹಾಗೂ ವಾಹನ ಚಾಲಕ ಇರಲಿದ್ದಾರೆ. ಜಾನುವಾರುಗಳ ಅನಾರೋಗ್ಯ ಸಮಸ್ಯೆ ಕುರಿತು ಕರೆ ಬಂದಲ್ಲಿ ಅಲ್ಲಿಗೆ ಹೋಗಿ ಸೂಕ್ತ ಚಕಿತ್ಸೆ ನೀಡಲಿದ್ದಾರೆ. ರೈತರು ಇದರ ಪೂರ್ಣ ಪ್ರಯೋಜನ ಪಡೆದಲ್ಲಿ ತಮ್ಮ ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!