ಹೊಸ ದಿಗಂತ ವರದಿ, ಮಡಿಕೇರಿ:
ರಾಜ್ಯದಲ್ಲಿರುವ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಓ.ಪಿ.) ರೂಪಿಸುವಂತೆ ಮತ್ತು 100 ಅಡಿ ದೂರದಲ್ಲಿ ನಿಂತು ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆದೇಶ ನೀಡಿದ್ದಾರೆ.
ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಸಂಬಂಧ ಸೂಚನೆ ನೀಡಿರುವ ಅವರು, ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಆನೆಗಳ ನಡುವೆ ನಡೆದ ಕಾದಾಟದ ವೇಳೆ ಮಹಿಳೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿರುವುದಾಗಿ ಪ್ರತಿಪಾದಿಸಿದ್ದಾರೆ.
ಎಸ್.ಓ.ಪಿ. ರೂಪಿಸಲು ನಿರ್ದೇಶನ
ಪರಿಸರ ಪ್ರವಾಸೋದ್ಯಮದ ಚಾರಣಪಥಗಳಲ್ಲಿ ಚಾರಣಿಗರ/ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಓ.ಪಿ.) ರೂಪಿಸಲಾಗಿದ್ದು, ಈ ಎಸ್.ಓ.ಪಿ. ಜಾರಿ ಖಚಿತಪಡಿಸಿಕೊಳ್ಳುವವರೆಗೆ ಚಾರಣಪಥಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಈಗಾಗಲೇ ಸೂಚಿಸಲಾಗಿದೆ. ಅದೇ ಪ್ರಕಾರವಾಗಿ ಸಾಕಾನೆ ಶಿಬಿರಗಳಿಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಎಸ್.ಓ.ಪಿ. ರೂಪಿಸಲು ಅವರು ನಿರ್ದೇಶನ ನೀಡಿದ್ದಾರೆ.
ಆನೆಗಳ ಬಳಿ ಹೋಗಿ ಹೂಗುವಂತಿಲ್ಲ
ರಾಜ್ಯದಲ್ಲಿರುವ ಎಲ್ಲಾ ಸಾಕಾನೆ ಶಿಬಿರದಲ್ಲಿ ನಾಳೆಯಿಂದಲೇ ಪ್ರವಾಸಿಗರು ಆನೆಯ ಬಳಿ ಹೋಗದಂತೆ, ಕನಿಷ್ಟ 100 ಅಡಿ ದೂರದಲ್ಲಿ ನಿಂತು ಆನೆ ಮೈತೊಳೆಯುವುದನ್ನು ವೀಕ್ಷಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು, ಮೈತೊಳೆಯಲು ಅವಕಾಶ ನೀಡದಂತೆ ಮತ್ತು ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ತಿನ್ನಿಸದಂತೆ ಆದೇಶ ಹೊರಡಿಸುವಂತೆಯೂ ಸಚಿವರು ಸೂಚಿಸಿದ್ದಾರೆ.



