September 29, 2026
Tuesday, September 29, 2026
spot_img

OTT, ಸಿನಿಮಾ ಪೈರಸಿ ತಡೆಗೆ ಸರ್ಕಾರ ಮಾಸ್ಟರ್ ಪ್ಲಾನ್: ಸಂಕಷ್ಟದಲ್ಲಿ ಟೆಲಿಗ್ರಾಂ ಆ್ಯಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರರಂಗ ಹಾಗೂ ಒಟಿಟಿ (OTT) ಸಂಸ್ಥೆಗಳಿಗೆ ಬಿಗ್ ರಿಲೀಫ್ ನೀಡಲು ಮುಂದಾಗಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸಿನಿಮಾ ಪೈರಸಿ ತಡೆಗಟ್ಟುವ ನಿಟ್ಟಿನಲ್ಲಿ ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಂ’ಗೆ (Telegram) ಅಧಿಕೃತ ನೋಟಿಸ್ ಜಾರಿ ಮಾಡಿದೆ. ಅನಧಿಕೃತವಾಗಿ ಚಲನಚಿತ್ರಗಳು ಮತ್ತು ವೆಬ್‌ಸಿರೀಸ್‌ಗಳನ್ನು ಹಂಚಿಕೊಳ್ಳುತ್ತಿರುವ ಚಾನೆಲ್‌ಗಳ ವಿರುದ್ಧ ಕೈಗೊಂಡ ಕ್ರಮಗಳ ಸಂಪೂರ್ಣ ವರದಿಯನ್ನು 15 ದಿನಗಳ ಒಳಗಾಗಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಸಂಪೂರ್ಣ ವೇದಿಕೆಯ ಹೊಣೆಗಾರಿಕೆ

ಹೊಸ ಸಿನಿಮಾಗಳು ಮತ್ತು ಒಟಿಟಿ ಕಂಟೆಂಟ್‌ಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟೆಲಿಗ್ರಾಂ ಗ್ರೂಪ್‌ಗಳಲ್ಲಿ ಕಾನೂನುಬಾಹಿರವಾಗಿ ಹರಿದಾಡುತ್ತಿವೆ ಎಂದು ಚಿತ್ರರಂಗದ ಪ್ರಮುಖರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೇವಲ ಪೈರಸಿ ಲಿಂಕ್‌ಗಳನ್ನು ಬ್ಲಾಕ್ ಮಾಡುವುದಕ್ಕೆ ಸೀಮಿತವಾಗದೆ, ಇಡೀ ಪ್ಲಾಟ್‌ಫಾರ್ಮ್‌ನ ಜವಾಬ್ದಾರಿಯನ್ನು ಪ್ರಶ್ನಿಸಿದೆ. ಭವಿಷ್ಯದಲ್ಲಿ ಇಂತಹ ಅಕ್ರಮಗಳನ್ನು ತಡೆಯಲು ಟೆಲಿಗ್ರಾಂ ಯಾವ ರೀತಿಯ ತಾಂತ್ರಿಕ ವ್ಯವಸ್ಥೆ ರೂಪಿಸಲಿದೆ ಎಂಬುದರ ಸಂಪೂರ್ಣ ರೋಡ್‌ಮ್ಯಾಪ್ ಅನ್ನು ಸರ್ಕಾರ ಕೇಳಿದೆ.

ಚಿತ್ರರಂಗಕ್ಕೆ ಆರ್ಥಿಕ ಚೇತರಿಕೆಯ ಭರವಸೆ

ಪೈರಸಿಯಿಂದಾಗಿ ಚಿತ್ರರಂಗ ಮತ್ತು ಒಟಿಟಿ ಸಂಸ್ಥೆಗಳು ಪ್ರತಿವರ್ಷ ಕೋಟ್ಯಂತರ ರೂಪಾಯಿ ಆರ್ಥಿಕ ನಷ್ಟ ಅನುಭವಿಸುತ್ತಿವೆ. ಡಿಜಿಟಲ್ ವೇದಿಕೆಗಳ ಹೊಣೆಗಾರಿಕೆಯನ್ನು ಹೆಚ್ಚಿಸುವ ಸರ್ಕಾರದ ಈ ನಿರ್ಣಾಯಕ ಕ್ರಮವು ಸಿನಿಕುಟುಂಬಕ್ಕೆ ದೊಡ್ಡ ಆನೆಬಲ ತಂದಿದೆ.

Must Read