ಹೊಸದಿಗಂತ, ಬೆಂಗಳೂರು:
ಜನರಿಗೆ ಗ್ಯಾರಂಟಿ ನಾಟಕ ಮೂಲಕ ಬಂದಿರುವ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ವಿಫಲವಾಗಿದೆ. ಇವತ್ತು ನಾಟಕ ಮಾಡಲು ದಿಲ್ಲಿಗೆ ಹೋಗಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಅವರು, ನಾಟಕ ಮಾಡಿ ಬಂದಿರುವ ಸರ್ಕಾರ ಕೊಟ್ಟ ಭರವಸೆ ಈಡೇರಿಸುವುದಕ್ಕೆ ಸಾಧ್ಯವಾಗದೇ ಮುಂದಿನ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದಕ್ಕೆ ಸಾಧ್ಯವಾಗದಿರುವ ಪರಿಸ್ಥಿತಿ ಇದೆ ಎಂದರು.
500 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಸರ್ಕಾರ ಎಲ್ಲ ಸಮಸ್ಯೆಗೂ ಸ್ಪಂದಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದೆವು. ಆದರೆ, ಕಾಂಗ್ರೆಸ್ ಎಲ್ಲವುದಕ್ಕೂ ಇದೀಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಇಷ್ಟೊಂದು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಹೊಸ ನಾಟಕ ಮಾಡಿದರು, ರೈತರಿಗೆ ಎರಡು ಸಾವಿರ ರೂ. ಹಣ ಕೊಡುತ್ತೇವೆಂದು ಘೋಷಣೆ ಮಾಡಿದರು. ಅದು ಕೂಡ ಘೋಷಣೆ ಆಗಿಯೇ ಉಳಿದಿದೆ. ರಾಜ್ಯದ ರೈತರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಕಿಸಾನ್ ಯೋಜನೆಯಡಿಯಲ್ಲಿ ನೀಡುತ್ತಿದ್ದ ಪ್ರೋತ್ಸಾಹಧನಕ್ಕೂ ಸಿದ್ದರಾಮಯ್ಯ ಅಡ್ಡ ಹಾಕಿದರು. ಬೊಮ್ಮಾಯಿ ಸರ್ಕಾರ ರೈತ ವಿದ್ಯಾನಿಧಿ ಕೊಟ್ಟಿತು. ಅದನ್ನು ಕೂಡ ನಿಲ್ಲಿಸಲಾಗಿದೆ. ಭಾಗ್ಯಲಕ್ಷ್ಮೀ ಕೂಡ ಬಂದ್ ಮಾಡಿದ್ದಾರೆ. ಹಾಲು ಉತ್ಪಾದಕರಿಗೆ 715 ಕೋಟಿ ರೂ.ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಏಳು ತಾಸು ಕರೆಂಟ್ ಕೊಡುವುದಕ್ಕೂ ಇವರ ಕೈಯಲ್ಲಿ ಆಗಿಲ್ಲ. ಬಿಜೆಪಿ ಅವಧಿಯಲ್ಲಿ 7 ತಾಸು ಕರೆಂಟ್ ಕೊಡುತ್ತಿತ್ತು. ಇವರ ಹೋರಾಟ ಏನೇ ಇದ್ದರೂ ಮೇಕೆದಾಟು ಹೋರಾಟ. ಇವತ್ತು ಮಾಡುತ್ತಿರುವ ದಿಲ್ಲಿ ಹೋರಾಟವು ಕೇವಲ ಮತದಾರರನ್ನು ಸೆಳೆಯುವುದಕ್ಕೆ ಮಾತ್ರ ಎಂದು ಟೀಕಿಸಿದರು.
ನಾವು 7,800 ಕೋಟಿ ರೂ.ಗಳನ್ನು ಉತ್ತರ ಕರ್ನಾಟಕ ಅಭಿವೃದ್ಧಿಗೆ ಕೊಟಿದ್ದೆವು. ಪ್ರಸಕ್ತ ರಾಜ್ಯದಲ್ಲಿ ರೈತ ವಿರೋಧಿ ಸರ್ಕಾರವಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರರು ಮನೆಗೆ ಕಳುಹಿಸುತ್ತಾರೆ. ಇವತ್ತು ರಾಜ್ಯದಲ್ಲಿ ಸಿಎಂ, ಡಿಸಿಎಂ ಇಲ್ಲ. ವಿಧಾನಸೌಧಕ್ಕೆ ಬೀಗ ಹಾಕಲಾಗಿದೆ. ಮುಂದೆ ಬರಗಾಲ ಇನ್ನೂ ಇದೆ, ಅದರ ಬಗ್ಗೆ ಯೋಚನೆ ಮಾಡಿಲ್ಲ. ಅದನ್ನೆಲ್ಲಾ ಬಿಟ್ಟು ದಿಲ್ಲಿ ಡ್ರಾಮಾ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಸರ್ಕಾರ ಬಂದು 8 ತಿಂಗಳಾಗಿವೆ. ಯಾವುದಾದರೂ ಒಂದು ಯೋಜನೆ ಘೋಷಣೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು.