ಕುತುಬ್‌ ಮಿನಾರ್‌ ಸುತ್ತ ಉತ್ಖನನ ಮಾಡುವಂತೆ ಸಂಸ್ಕೃತಿ ಸಚಿವಾಲಯದಿಂದ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಜ್ಞಾನವಾಪಿ ಮಸೀದಿಯ ನಂತರ ಭುಗಿಲೆದ್ದಿರುವ ಕುತುಬ್‌ ಮಿನಾರ್‌ ವಿವಾದಕ್ಕೆ ಈಗ ಹೊಸ ತಿರುವು ಸಿಕ್ಕಿದ್ದು ಕುತುಬ್‌ ಮಿನಾರ್‌ ಅನ್ನು ಸರ್ವೇ ಮಾಡುವಂತೆ ಭಾರತದ ಸಂಸ್ಕೃತಿ ಸಚಿವಾಲಯವು ಆದೇಶ ನೀಡಿದೆ.

ಈ ಕುರಿತು ಉತ್ಖನನ ನಡೆಸಿ ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಸಂಸ್ಕೃತಿ ಸಚಿವಾಲಯವು ಆದೇಶ ನೀಡಿದ್ದು ಮಿನಾರ್ ನ ದಕ್ಷಿಣ ದಿಕ್ಕಿನಲ್ಲಿ ಉತ್ಖನನ ಪ್ರಾರಂಭ ಮಾಡಬಹುದು ಎಂದಿದೆ. ಕುತುಬ್‌ ಮಿನಾರ್‌ ಕುರಿತು ವಿವಾದ ಭುಗಿಲೆದ್ದ ಬೆನ್ನಲ್ಲೇ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಮೇ 21 ರಂದು ಶನಿವಾರ ಮೂವರು ಇತಿಹಾಸಕಾರರು, ನಾಲ್ವರು ಎಎಸ್ಐ ಅಧಿಕಾರಿಗಳು ಮತ್ತು ಸಂಶೋಧಕರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಕುತುಬ್ ಮಿನಾರ್ ಸಂಕೀರ್ಣದಲ್ಲಿ 1991 ರಿಂದ ಉತ್ಖನನ ಕಾರ್ಯ ನಡೆದಿಲ್ಲ ಎಂದು ಎಎಸ್‌ಐ ಅಧಿಕಾರಿಗಳು ಕಾರ್ಯದರ್ಶಿಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಮೋಹನ್‌ ಅವರು ಈ ನಿರ್ಧಾರಗಳನ್ನು ತೆಗೆದುಕೊಂಡರು ಎಂದು ಮೂಲಗಳು ವರದಿ ಮಾಡಿವೆ.

ಈ ಹಿಂದೆ ಎಎಸ್‌ಐನ ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಅವರು ಕುತುಬ್ ಮಿನಾರ್ ಅನ್ನು ಸೂರ್ಯನ ದಿಕ್ಕನ್ನು ಅಧ್ಯಯನ ಮಾಡಲು ರಾಜಾ ವಿಕ್ರಮಾದಿತ್ಯ ನಿರ್ಮಾಣ ಮಾಡಿದ್ದಾನೆಯೇ ಹೊರತು ಕುತುಬ್‌ ಉದ್‌ ದೀನ್‌ ಐಬಕ್‌ ನಿರ್ಮಿಸಿಲ್ಲ ಎಂದಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!