ಕುಶಾಲನಗರದಲ್ಲಿ ಅದ್ಧೂರಿ ಹನುಮ ಜಯಂತಿ ಶೋಭಾಯಾತ್ರೆ

ಹೊಸದಿಗಂತ ವರದಿ ಕುಶಾಲನಗರ:

ಹನುಮ ಜಯಂತಿ ಕಾರ್ಯಕ್ರಮ ಹಿನ್ನಲೆಯಲ್ಲಿ ಕುಶಾಲನಗರದ ಹನುಮಂತೋತ್ಸವ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಮಂಟಪಗಳ ಶೋಭಾ ಯಾತ್ರೆಯಲ್ಲಿ ಕುಶಾಲನಗರದ ಎಚ್.ಆರ್.ಪಿ.ಕಾಲೋನಿಯ ಅಂಜನಿಪುತ್ರ ಜಯಂತ್ಯೋತ್ಸವ ಆಚರಣಾ ಸಮಿತಿಯ ಪ್ರಸ್ತುತ ಪಡಿಸಿದ ಶಾಖಾಂಬರಿಯಿಂದ ದುರ್ಗಮಾಸುರನ‌ ಸಂಹಾರ ಮಂಟಪ‌ ಪ್ರಥಮ ಸ್ಥಾನ‌ ಪಡೆದು ರೂ 15 ಸಾವಿರ ನಗದು ಪಡೆದುಕೊಂಡಿದೆ.

ಸೀತಾಪಹರಣ ಕಥೆ ಒಳಗೊಂಡ ಇಬೈಚನಹಳ್ಳಿಯ ಶ್ರೀ ಮಾರಿಯಮ್ಮ ದೇವಸ್ಥಾನ ಸಮಿತಿ ಹಾಗೂ ಗೆಳೆಯರ ಬಳಗದ ಮಂಟಪಕ್ಕೆ ದ್ವಿತೀಯ ಸ್ಥಾನ, ಗುಡ್ಡೆಹೊಸೂರು-ಬಸವನಹಳ್ಳಿಯ ಶ್ರೀ ವೀರಾಂಜನೇಯ ಸೇವಾ ಸಮಿತಿ, ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಮಂಟಪಕ್ಕೆ ತೃತೀಯ ಸ್ಥಾನ ಲಭಿಸಿದೆ. ದ್ವಿತೀಯ ರೂ 10 ಸಾವಿರ, ತೃತೀಯ ರೂ 7500 ನಗದು ಬಹುಮಾನ ಲಭಿಸಿದೆ.

ಶೋಭಾಯಾತ್ರೆಯಲ್ಲಿ ಏಳು ವಿದ್ಯುತ್ ಅಲಂಕೃತ ‌ಮಂಟಪಗಳು ಭಾಗವಹಿಸಿದ್ದವು. ಕುಶಾಲನಗರ, ಮುಳ್ಳುಸೋಗೆ, ಬೈಚನಹಳ್ಳಿ, ಮಾದಾಪಟ್ಟಣ, ಗುಡ್ಡೆಹೊಸೂರು, ಕೂಡಿಗೆ ಗ್ರಾಮಗಳಿಂದ ವಿದ್ಯುತ್‌ ಅಲಂಕೃತ ಭವ್ಯ ಮಂಟಪಗಳು ಪಾಲ್ಗೊಂಡಿದ್ದವು. ಆಯಾ ಗ್ರಾಮಗಳಿಂದ ಡಿಜೆ ಯೊಂದಿಗೆ ಮಂಟಪಗಳು ಸಂಜೆ ಕುಶಾಲನಗರಕ್ಕೆ ಅಗಮಿಸಿದವು.

ಮಂಟಪಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಾಲ್ಗೊಂಡ 7 ಮಂಟಪಗಳಲ್ಲಿ ಪ್ರಥಮ‌ ಮೂರು ಬಹುಮಾನ ಹೊರತುಪಡಿಸಿ ಉಳಿದ ಮಂಟಪಗಳಿಗೂ‌ ರೂ 5 ಸಾವಿರ ನಗದನ್ನು ಸಮಾಒಧಾನಕರ ಬಹುಮಾನವಾಗಿ‌ ನೀಡಲಾಗಿದೆ. ಬಹುಮಾನಗಳನ್ನು ಆಯ್ಕೆ ಮಾಡಲು, ಕುಶಾಲನಗರದ ಹಿರಿಯರ, ಸಮಾಜ ಸೇವಕರ ಒಂದು ತಂಡವನ್ನು ರಚಿಸಿ ಆ ತಂಡದ ಮೂಲಕ ಉತ್ತಮ‌ ಮಂಟಪಗಳ ಅಯ್ಕೆ ಮಾಡಲಾಯಿತು.

ಕುಶಾಲನಗರದ ಎಚ್.ಆರ್.ಪಿ.ಕಾಲನಿಯ ಶ್ರೀರಾಮ ಮಂದಿರದ ಹಿಂದೂ ಜಾಗರಣ ವೇದಿಕೆ ಹಾಗೂ ಮಾದಾಪಟ್ಟಣದ ಶ್ರೀ ರಾಮದೂತ ಜಯಂತಿ ಆಚರಣೆ ಸಮಿತಿ ಹಾಗೂ ಹಿಂದೂ ಜಾಗರಣ ವೇದಿಕೆ, ಗುಮ್ಮನಕೊಲ್ಲಿಯ ಶ್ರೀ ಬಸವೇಶ್ವರ ಯುವಕ ಸಂಘ, ಗೋಪಾಲ್ ಸರ್ಕಲ್ ನ ಶ್ರೀ ಗಜಾನನ ಯುವಕ ಸಂಘದ ಮಂಟಪಗಳು ಸೇರಿದಂತೆ ರಥಬೀದಿಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಉತ್ಸವ‌ ಮೂರ್ತಿ‌ ಪಾಲ್ಗೊಂಡಿತ್ತು.

ಪ್ರತಿ‌ ಮಂಟಪಗಳಿಗೂ‌ ಬಹುಮಾನದ ಜೊತೆ ಆಂಜನೇಯ ಸ್ವಾಮಿ ‌ಮೂರ್ತಿಯನ್ನು‌ ಉಡುಗೊರೆ ನೀಡಲಾಯಿತು. ಕುಶಾಲನಗರ ಇತಿಹಾಸದಲ್ಲಿ ಪ್ರಥಮ‌ ಎಂಬಂತೆ ದಸರಾ ಉತ್ಸವ ಮಾದರಿಯಲ್ಲಿ ಹನುಮ‌ ಜಯಂತಿ ಶೋಭಾಯಾತ್ರೆ ನಡೆಯಿತು. ಮಹಿಳೆಯರು, ಮಕ್ಕಳು, ವೃದ್ದರಾದಿಯಾಗಿ ನೆರೆಯ ಗ್ರಾಮಗಳಿಂದ ಸಾರ್ವಜನಿಕರು ಕುಶಾಲನಗರದಲ್ಲಿ ಜಮಾಯಿಸಿದ್ದರು. ಪ್ರಮುಖ‌ ಬೀದಿಗಳಲ್ಲಿ ಮಂಟಪಗಳೊಂದಿಗೆ ನೃತ್ಯ ಮಾಡುತ್ತಾ ಸಾಗಿಬಂದರು.

ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್, ಪಪಂ ಅಧ್ಯಕ್ಷ ಬಿ.ಜೈವರ್ಧನ್ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿದರು. ಆಚರಣಾ ಸಮಿತಿ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಕೆ.ಎನ್.ದೇವರಾಜ್, ಮಂಜುನಾಥ್, ಜಗದೀಶ್, ಗಿರಿ, ಕೆ.ಜಿ.ಮನು, ಶಿವಾಜಿ, ಪ್ರಜ್ವಲ್, ಶಶಿಕುಮಾರ್ ಸೇರಿದಂತೆ ಆಯಾ ಗ್ರಾಮಗಳ ಮಂಟಪಗಳ ಸಮಿತಿ ಪ್ರಮುಖರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಂದಾಜು 20 ಸಾವಿರಕ್ಕೂ ಅಧಿಕ ಮಂದಿ ಈ ಸಂದರ್ಭ‌ ನೆರೆದಿದ್ದರು. ಡಿವೈಎಸ್ಪಿ ಗಂಗಾಧರ್, ವೃತ್ತ ನಿರೀಕ್ಷಕ‌ ಮಹೇಶ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!