ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಂದಿರು ತಮ್ಮ ಮಕ್ಕಳಿಗೆ ಉಪ್ಪು, ಸಕ್ಕರೆ ಕೊಡೋದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಆದರೆ ಇಲ್ಲೊಬ್ಬ ಮಹಾತಾಯಿ ತನ್ನ ಮಗುವಿಗೆ ಸಿಗರೇಟ್ ಸೇದಿಸಿ ಮದ್ಯ ಕುಡಿಸಿದ್ದಾಳೆ ಎನ್ನಲಾಗಿದೆ.
ಅಸ್ಸಾಂ ರಾಜ್ಯದ ಸಿಲ್ಚಾರ್ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ 20 ತಿಂಗಳ ಮಗುವಿಗೆ ಸಿಗರೇಟ್ ಸೇದಲು ಮತ್ತು ಮದ್ಯಪಾನ ಮಾಡುವಂತೆ ಒತ್ತಾಯಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ವರದಿಗಳ ಪ್ರಕಾರ ಕಳೆದ ಬುಧವಾದ ರಾತ್ರಿ ತಾಯಿಯೊಬ್ಬಳು ತನ್ನ ಹೆತ್ತ ಕಂದಮ್ಮನಿಗೆ ಸಿಗರೇಟ್ ಸೇದಿಸಲು ಹಾಗೂ ಮದ್ಯ ಕುಡಿಸಲು ಒತ್ತಾಯಿಸಿದ್ದಾಳೆ. ಈ ಬಗ್ಗೆ ಮಕ್ಕಳ ಸಹಾಯವಾಣಿ ಸೆಲ್‌ನಲ್ಲಿ ದೂರು ದಾಖಲಾಗಿದ್ದು, ತಾಯಿಯನ್ನು ವಶಕ್ಕೆ ಪಡೆದು ಮಗುವನ್ನು ರಕ್ಷಿಸಲಾಗಿದೆ.
ಸದ್ಯ ತಾಯಿ ಮತ್ತು ಮಗು ಇಬ್ಬರೂ ಮಕ್ಕಳ ಕಲ್ಯಾಣ ಸಮಿತಿಯವಶದಲ್ಲಿದ್ದು, ಈ ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ, ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಕ್ಕಳ ಸಹಾಯವಾಣಿ ಸೆಲ್ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.