ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ರಾಕ್ಷಿಯಲ್ಲಿ ಇಷ್ಟೆಲ್ಲಾ ಉಪಯೋಗವೇ…? ಯೆಸ್…ಅನೇಕರಿಗೆ ದ್ರಾಕ್ಷಿ ಒಂದು ಅಮೃತ ಸತ್ವ ಹೊಂದಿರುವ ಫಲ ಎಂಬುದು ತಿಳಿದೇ ಇಲ್ಲ!. ಚೆನ್ನಾಗಿ ತೊಳೆದ ದ್ರಾಕ್ಷಿ, ರಾಸಯನಿಕ ರಹಿತವಾಗಿ ಸಾವಯವ ರೀತಿಯಲ್ಲಿ ಬೆಳೆದ ದ್ರಾಕ್ಷಿಯನ್ನು ಬೇಸಿಗೆಯ ಸಂದರ್ಭದಲ್ಲಿ ಸೇವಿಸಿದ್ದೇ ಆದರೆ ಅನೇಕ ರೋಗಗಳಿಂದ ದೇಹವನ್ನು ಕಾಪಾಡಬಹುದಾಗಿದೆ. ಪುಟ್ಟ ದ್ರಾಕ್ಷಿ ಹಣ್ಣಲ್ಲಿ ಅಪಾರ ಪೋಷಕಾಂಶಗಳಿವೆ. ಇದು ದೇಹದ ಆರೋಗ್ಯವೃದ್ಧಿಸುವ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಪೊಟಾಶಿಯಂ, ಕ್ಯಾಲ್ಸಿಯಂ,ಫ್ಲೇವನಾಯ್ಡ್ ಅಂಶಗಳು ಸಮೃದ್ಧವಾಗಿದ್ದು ಇದು ಮಾನವ ದೇಹಕ್ಕೆ ಸಾಕಷ್ಟು ಸತ್ಪರಿಣಾಮ ನೀಡುತ್ತದೆ. ಉತ್ತಮ ಕ್ಯಾಲೋರಿ ಹಾಗೂ ಹೆಚ್ಚಿನ ಫೈಬರ್ ಅಂಶಗಳೂ ಈ ದ್ರಾಕ್ಷಿಯಲ್ಲಿವೆ. ಮೆಗ್ನೀಶಿಯಂ ಹಾಗೂ ಸಿಟ್ರಿಕ್ ಆಮ್ಲದ ಅಂಶವೂ ದ್ರಾಕ್ಷಿಯಲ್ಲಿದೆ. ಕಣ್ಣುಗಳ ಆರೋಗ್ಯಕ್ಕೆ ದ್ರಾಕ್ಷಿ ಸಹಕಾರಿಯಾಗಿದೆ. ದ್ರಾಕ್ಷಿ ಹಣ್ಣಿನಲ್ಲಿರುವ ಆಂಟಿ ವೈರಲ್ ಗುಣಲಕ್ಷಣವು ಚರ್ಮದ ಅಲರ್ಜಿಯನ್ನು ತೆಗೆದು ಹಾಕುವ ಸಾಮರ್ಥ್ಯ ಹೊಂದಿದೆ. ಒಂದು ಸಂಶೋಧನೆಯ ಪ್ರಕಾರ ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗವನ್ನು ತಡೆಯಲು ದ್ರಾಕ್ಷಿ ಸಹಕಾರಿ ಎಂಬುದು ಸಾಬೀತಾಗಿದೆ. ದ್ರಾಕ್ಷಿ ಹಣ್ಣನ್ನು ಅಂಗಡಿಯಿಂದ ಖರೀದಿಸಿ ನೇರವಾಗಿ ಸೇವಿಸಬೇಡಿ.ಶುದ್ಧ ಅರಶಿನ ಹಾಗೂ ಉಪ್ಪು ನೀರಿನಲ್ಲಿ ಚೆನ್ನಾಗಿ ತೊಳೆದು ನಂತರ ಸೇವಿಸಿ.