ಉಮರ್ ಖಾಲಿದ್ ಮಾತಾಡಿದ್ದು ಪ್ರಚೋದನಕಾರಿ, ದ್ವೇಷಪೂರಿತ- ಜಾಮೀನು ನಿರಾಕರಿಸುತ್ತ ದೆಹಲಿ ಕೋರ್ಟ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2020ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಕಾಯ್ದೆ (UAPA)ಯ ಅಡಿಯಲ್ಲಿ ಬಂಧಿತನಾಗಿರುವ ಉಮರ್‌ ಖಾಲೀದ್‌ ಮಾಡಿರುವ ಭಾಷಣವು “ಪ್ರಚೋದನಕಾರಿ ಮತ್ತು ದ್ವೇಷ ಪೂರಿತವಾಗಿದೆ.” ಎಂದು ದೆಹಲಿ ಕೋರ್ಟ್‌ ಹೇಳಿದೆ.

ವಿಚಾರಣಾ ನ್ಯಾಯಾಲಯವು ತನ್ನ ಜಾಮೀನನ್ನು ನಿರಾಕರಿಸಿರುವ ಕುರಿತು ಖಾಲಿದ್‌ ಮೇಲ್ಮನವಿ ಸಲ್ಲಿಸಿದ್ದರು. ಅವರ ಭಾಷಣವನ್ನು ವೀಕ್ಷಿಸಿದ ನಂತರ ಪ್ರತಿಕ್ರಿಯೆ ನೀಡಿರುವ ನ್ಯಾಯ ಪೀಠವು “ನಿಮ್ಮ ಭಾಷಣಗಳು ಪ್ರಚೋದನಾಕಾರಿಯಾಗಿವೆ. ನಿಮ್ಮ ಪೂರ್ವಜರು ಬ್ರಿಟೀಷರ ದಲಾಲಿಗಳಾಗಿದ್ದರು ಎಂಬ ನಿಮ್ಮ ಮಾತಿನ ಮೂಲಕ ನೀವು ಏನು ಹೇಳ ಹೊರಟಿದ್ದೀರಿ? ಕೇವಲ ಒಂದು ಸಮಾಜದವರು ಮಾತ್ರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ಹೇಳುವ ನಿಮ್ಮ ಮಾತುಗಳು ದ್ವೇಷಪೂರಿತವಾಗಿಲ್ಲವೇ ಗಾಂಧೀಜಿಯವರು ಎಂದಾದರೂ ಇಂಥಹ ಶಬ್ದಗಳ ಬಳಕೆ ಮಾಡಿದ್ದರೇ? ಭಗತ್ ಸಿಂಗ್‌ ಇಂಥಹ ಭಾವನೆಯನ್ನು ಮೂಡಿಸಿದ್ದರೇ?” ಎಂದಿದೆ.

ಅದಕ್ಕೆ ವಿರೋಧವಾಗಿ ಖಾಲಿದ್ ಪರ ವಹಿಸಿದ ವಕೀಲ ವಾಕ್‌ ಸ್ವಾತಂತ್ರ್ಯವನ್ನು ಉಲ್ಲೇಖಿಸಿದಾಗ “ನಿಮ್ಮ ವಾಕ್‌ ಸ್ವಾತಂತ್ರ್ಯವು ಭಾರತೀಯ ದಂಡ ಸಂಹಿತೆ 153A (ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಯನ್ನು ಆಕರ್ಷಿಸುತ್ತದೆ. ಇಂತಹ ದ್ವೇಷಪೂರಿತ ಹೇಳಿಕೆಗಳು ಪ್ರಜಾಪ್ರಭುತ್ವದ ಹಾಗೂ ವಾಕ್‌ ಸ್ವಾತಂತ್ರ್ಯದ ಯಾವ ದೃಷ್ಟಿಕೋನದಿಂದಲೂ ಸ್ವೀಕಾರಾರ್ಹವಲ್ಲ” ಎಂದು ಮಾತಿನ ಛಾಟಿ ನೀಡಿದೆ.

ಮಾರ್ಚ 24 ರಂದು ಕರ್ಕರಡೂಮಾ ಕೋರ್ಟ್‌ ಖಾಲೀದ್‌ ಗೆ ಜಾಮೀನು ನಿರಾಕರಿಸಿತ್ತು. ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಆತ ನಿರ್ದಿಷ್ಟ ಉದ್ದೇಶಗಳಿಗೋಸ್ಕರ ನಿರ್ಮಿಸಲಾದ ವಾಟ್ಸಾಪ್‌ ಗ್ರುಪ್‌ ಸದಸ್ಯ ಎಂಬುದನ್ನು ಹೆಚ್ಚುವರಿ ಸೆಷೆನ್ಸ್‌ ನ್ಯಾಯಾಧೀಶ ಅಮಿತಾಭ್‌ ರಾವತ್‌ ಕಂಡು ಹಿಡಿದಿದ್ದರು. 2019 ರಲ್ಲಿ ಪೌರತ್ವ ಕಾಯ್ದೆಯು ಅಂಗೀಕಾರಗೊಂಡಾಗಿನಿಂದ 2020 ಗಲಭೆಯ ವರೆಗೆ ಖಾಲೀದ್‌ ಪಾಲ್ಗೊಳ್ಳುವಿಕೆಯ ಕುರಿತಾಗಿ ಎಳೆಎಳೆಯಾಗಿ ಗಮನಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!