ಹೊಸದಿಗಂತ ವರದಿ,ತುಮಕೂರು:
ಉತ್ತರ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲೂ 4500 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ಕಾರಿಡಾರ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಗ್ರೀನ್ ಫೀಲ್ಡ್ ಕರ್ನಾಟಕದ ದೊಡ್ಡ ಯೋಜನೆಯಾಗಲಿದೆ ಎಂದು ಹೇಳಿದರು.
ಹಾಸನ, ತಿಪಟೂರು, ಹುಳಿಯಾರು, ಗ್ರೀನ್ ಫೀಲ್ಡ್ ಕಾರಿಡಾರ್ ನಿರ್ಮಾಣವಾಗಲಿದೆ. ತುಮಕೂರು ಜಿಲ್ಲೆಯಲ್ಲಿ 40 ಕಿ.ಮೀ.ನಲ್ಲಿ ಹಾದು ಹೋಗಲಿದೆ. 500 ಕೋಟಿ ರೂ. ವೆಚ್ಚದಲ್ಲಿ ಪುಣೆ-ಬೆಂಗಳೂರು 500 ಕಿ.ಮೀ. ವ್ಯಾಪ್ತಿಯಲ್ಲಿ ಗ್ರೀನ್ ಫೀಲ್ಡ್ ಕಾರಿಡಾರ್ ಆಗಲಿದೆ ಎಂದರು.
ರಾಜ್ಯದಲ್ಲಿ ಒಟ್ಟು 5072 ಕೋಟಿ ರೂ. ರೈಲ್ವೆ ಯೋಜನೆಗೆ ಅನುದಾನ ತಂದಿದ್ದೇನೆ. ಈಗಾಗಲೇ 17 ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದು, ಅಲ್ಲಿ ಆಗಬೇಕಾಗಿರುವ ರೈಲ್ವೆ ಯೋಜನೆಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದರು.
ತುಮಕೂರು-ರಾಮದುರ್ಗ ಮಾರ್ಗದಲ್ಲಿ 2500 ಕೋಟಿ ವೆಚ್ಚದಲ್ಲಿ 2ನೇ ಹಂತದ ಕೆಲಸಗಳು ಆರಂಭವಾಗಿವೆ. ಶೇ. 90 ರಷ್ಟು ಭೂ ಹಸ್ತಾಂತರ ಕಾರ್ಯ ಮುಗಿದಿದೆ. 2027ರ ಡಿಸೆಂಬರ್‍ಗೆ ಈ ಯೋಜನೆ ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಸುರೇಶ್‍ಗೌಡ, ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.