ಅರಣ್ಯ ಇಲಾಖೆ ಸಂಕಲ್ಪದಿಂದ ಹಸಿರು ವನ

– ಮಲ್ಲಿಕಾರ್ಜುನ ತುಂಗಳ

ರಬಕವಿ-ಬನಹಟ್ಟಿ ಹಾಗೂ ತೇರದಾಳ ವಲಯ ಮತ್ತು ಸುತ್ತಲಿನ ಗ್ರಾಮಗಳಲ್ಲಿರುವ 3 ಸಾವಿರ ಎಕರೆ ಅರಣ್ಯ ಸಂಪತ್ತು ಉಳಿಸಿ-ಬೆಳೆಸುವುದೇ ಒಂದು ಸವಾಲಾಗಿ ಕಾಡುತ್ತಿತ್ತು. ಆದರೆ ಪ್ರಸ್ತುತ 2200 ಎಕರೆ ಅರಣ್ಯ ಭೂಮಿಯ ರಕ್ಷಣೆಯೊಂದಿಗೆ ಬಹುತೇಕ ಪ್ರದೇಶ ಹಸಿರುಮಯವಾಗಿ ಕಂಗೊಳಿಸುತ್ತಿದೆ. ಪ್ರಸಕ್ತ ವರ್ಷ 125 ಎಕರೆಯಷ್ಟು ಅರಣ್ಯ ಭೂಮಿಯಲ್ಲಿ ಬೇವು, ಹೊಂಗೆ, ತಾಪಸಿ, ಸಂಕೇಶ್ವರ, ಕ್ಯಾಶ್ವಾಡ್, ಗೊಬ್ಬರ ಗಿಡ ಸೇರಿದಂತೆ ಇತರೆ ಗಿಡಗಳನ್ನು ನೆಟ್ಟು ಹಸಿರು ತೋರಣಕ್ಕೆ ಅರಣ್ಯ ಇಲಾಖೆ ರಣಕಹಳೆ ಮೊಳಗಿಸಿದೆ.

ಹಸಿರು ಬೆಳೆಸೋಣ ಎಂಬ ಸರ್ಕಾರ ಹಾಗೂ ಸಹಕಾರದ ತತ್ವದಡಿ ಬನಹಟ್ಟಿಯ ಅಶೋಕ ಕಾಲೋನಿ ಹಾಗೂ ಜಗದಾಳ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 200 ಎಕರೆ ಜಮೀನಿನಲ್ಲಿ ಸುಂದರ ಪ್ರದೇಶ ಪರಿಸರ ಪ್ರೇಮಿಗಳನ್ನು ಕೈಬೀಸಿ ಕರೆಯುವಲ್ಲಿ ಕಾರಣವಾಗಿದೆ. ಪ್ರಸಕ್ತ ವರ್ಷ 10 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡುವ ಮೂಲಕ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಮರ ಬೆಳೆಯಲು ಅರಣ್ಯ ಇಲಾಖೆಯ ಉಪವಲಯ ಅಧಿಕಾರಿ ಮಲ್ಲಿಕಾರ್ಜುನ ನಾವಿ ಪಣ ತೊಟ್ಟಿದ್ದಾರೆ.

ಮನಸೋತ ಜನ:

ಯಾವುದೇ ಕರ್ಕಶ ಶಬ್ದವಿಲ್ಲದೆ ಹಚ್ಚ ಹಸಿರಿನಿಂದ ಕೂಡಿರುವ ಈ ಜಾಗ ಅತ್ಯಂತ ಪ್ರಶಾಂತ ವಾತಾವರಣದಿಂದ ಕೂಡಿದ್ದು, ವಾಯು ವಿಹಾರಿಗಳಿಗಂತೂ ಪ್ರಕೃತಿಯ ಸ್ವರ್ಗದಂತ ಭಾಸವಾಗುತ್ತದೆ.

ಕಾಯಕಲ್ಪಕ್ಕೆ ಸಹಕಾರ ಬೇಕಿದೆ:

ಸಾಕಷ್ಟು ಗಮನ ಸೆಳೆಯುತ್ತಿರುವ ಅರಣ್ಯ ಇಲಾಖೆಯ ಸಸ್ಯೋದ್ಯಾನಕ್ಕೆ ಮತ್ತಷ್ಟು ಕಾಯಕಲ್ಪದ ಅವಶ್ಯವಿದ್ದು, ಜನತೆ ಸಹಕರಿಸಬೇಕಿದೆ. ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ, ರಸ್ತೆ, ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯ ಒದಗಿಸುವ ಕೆಲಸ ಸಂಬಂಧಿತ ಇಲಾಖೆ ಮಾಡಬೇಕಿದೆ. ಇದೊಂದು ಪ್ರವಾಸಿ ಸ್ಥಳವಾಗುವುದು ನಿಶ್ಚಿತವೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಯಾವುದೇ ವಾಹನಗಳ ಭರಾಟೆ ಇಲ್ಲದ ಈ ರಸ್ತೆಯ ಮುಖಾಂತರ ಪ್ರತಿಯೊಬ್ಬರೂ ವಾಯುವಿಹಾರಕ್ಕೆ ಬರಲು ಅನುಕೂಲವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!