July 26, 2026
Sunday, July 26, 2026
spot_img

ಯುವ ರಾಜಕಾರಣಕ್ಕೆ ರೇವಂತ್ ರೆಡ್ಡಿ ಗ್ರೀನ್ ಸಿಗ್ನಲ್: ವಯೋಮಿತಿ 25 ರಿಂದ 21ಕ್ಕೆ ಇಳಿಸಲು ಪ್ಲ್ಯಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದ ಯುವ ಜನಾಂಗಕ್ಕೆ ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಶಾಸಕರು ಮತ್ತು ಸಂಸದರಾಗಲು ಸ್ಪರ್ಧಿಸುವ ಕನಿಷ್ಠ ವಯೋಮಿತಿಯನ್ನು ಪ್ರಸ್ತುತ ಇರುವ 25 ವರ್ಷಗಳಿಂದ 21 ವರ್ಷಕ್ಕೆ ಇಳಿಸಲು ಅವರು ಪ್ರಸ್ತಾಪಿಸಿದ್ದಾರೆ. ಈ ಕುರಿತು ಆಗಸ್ಟ್ ಮೊದಲ ವಾರದಲ್ಲೇ ತೆಲಂಗಾಣ ಶಾಸನಸಭೆಯ ವಿಶೇಷ ಜಂಟಿ ಅಧಿವೇಶನ ಕರೆದು ನಿರ್ಣಯ ಅಂಗೀಕರಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಜಂಟಿ ನಿರ್ಣಯ ರವಾನೆ

ಹೈದರಾಬಾದ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ಆಗಸ್ಟ್ ಮೊದಲ ವಾರದಲ್ಲಿ ತೆಲಂಗಾಣ ವಿಧಾನಸಭಾ ಮತ್ತು ವಿಧಾನ ಪರಿಷತ್‌ಗಳ ವಿಶೇಷ ಅಧಿವೇಶನದಲ್ಲಿ ವಯೋಮಿತಿ ಇಳಿಕೆಯ ಈ ನಿರ್ಣಯವನ್ನು ಅಂಗೀಕರಿಸಲಾಗುವುದು ಎಂದು ತಿಳಿಸಿದರು. ತದನಂತರ, ಈ ಸಾಂವಿಧಾನಿಕ ತಿದ್ದುಪಡಿಯ ಪ್ರಸ್ತಾವನೆಯನ್ನು ಮುಂದಿನ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ರವಾನಿಸಲಾಗುವುದು ಮತ್ತು ತಾವು ವೈಯಕ್ತಿಕವಾಗಿ ಪ್ರಧಾನಿಗಳನ್ನು ಭೇಟಿಯಾಗಿ ಮನವಿ ಮಾಡುವುದಾಗಿ ಸ್ಪಷ್ಟಪಡಿಸಿದರು.

ಐಎಎಸ್ ಆಗಬಹುದಾದರೆ ಶಾಸಕರಾಗಲು ಏಕೆ ಸಾಧ್ಯವಿಲ್ಲ?

ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡ ಮುಖ್ಯಮಂತ್ರಿಗಳು, “ಭಾರತದಲ್ಲಿ 21 ವರ್ಷ ತುಂಬಿದ ಯುವಕರು ದೇಶದ ಅತ್ಯುನ್ನತ ನಾಗರಿಕ ಸೇವೆಗಳಾದ ಐಎಎಸ್ (IAS), ಐಪಿಎಸ್ (IPS) ಅಧಿಕಾರಿಗಳಾಗಬಹುದು, ಹಾಗೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಿ ಮೇಯರ್ ಅಥವಾ ಪಂಚಾಯತ್ ಪ್ರತಿನಿಧಿಗಳಾಗಬಹುದು. ಹಾಗಿರುವಾಗ ಅವರು ಶಾಸನಸಭೆ ಅಥವಾ ಲೋಕಸಭೆಗೆ ಸ್ಪರ್ಧಿಸಲು ಏಕೆ ಸಾಧ್ಯವಿಲ್ಲ?” ಎಂದು ಪ್ರಶ್ನಿಸಿದ್ದಾರೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ. 30 ರಷ್ಟಿರುವ ಯುವ ಪೀಳಿಗೆಗೆ ಸಂಸತ್ತಿನಲ್ಲಿ ಸದ್ಯ ಶೇ. 1 ಕ್ಕಿಂತ ಕಡಿಮೆ ಪ್ರಾತಿನಿಧ್ಯ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಐತಿಹಾಸಿಕ ಸುಧಾರಣೆಗಳ ಸ್ಮರಣೆ

ಈ ಸಂದರ್ಭದಲ್ಲಿ ಹಳೆಯ ಸಾಂವಿಧಾನಿಕ ಸುಧಾರಣೆಗಳನ್ನು ನೆನಪಿಸಿದ ರೇವಂತ್ ರೆಡ್ಡಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು 61ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದ್ದರು. ಅದೇ ರೀತಿ ಮತ್ತೊಬ್ಬ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ವಯಸ್ಸನ್ನು 21ಕ್ಕೆ ಇಳಿಸಿದ್ದರು. ಇಂಗ್ಲೆಂಡ್, ಜರ್ಮನಿ ಹಾಗೂ ಸಿಂಗಾಪುರದಂತಹ ದೇಶಗಳಲ್ಲೂ ಯುವ ನಾಯಕರಿಗೆ ಆರಂಭಿಕ ವಯಸ್ಸಿನಲ್ಲೇ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರುವುದನ್ನು ಅವರು ಉದಾಹರಿಸಿದರು. ಈ ಮಹತ್ವದ ಕಾನೂನು ಜಾರಿಗೆ ಬಂದರೆ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಯುವಕರ ನೇರ ಭಾಗವಹಿಸುವಿಕೆಗೆ ದೊಡ್ಡ ವೇದಿಕೆ ಸಿಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !