ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗಲಿದೆ. ಮೈಸೂರು ಮಹಾರಾಜ ಕಾಲೇಜು ಆವರಣದಲ್ಲಿ ವೇದಿಕೆ ಸಿದ್ಧಗೊಂಡಿದ್ದು, ಒಂದು ಲಕ್ಷ ಜನ ಸೇರುವ ಸಾಧ್ಯತೆಯಿದೆ. ಕಾಂಗ್ರೆಸ್ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆ ಎರಡೂ ಕಾರ್ಯಕ್ರಮಗಳನ್ನು ಒಟ್ಟಿಗೆ, ಒಂದೇ ವೇದಿಕೆಯಲ್ಲಿ ರೂಪಿಸಿದೆ.
ಇಂದಿನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಭಾಗಿಯಾಗಲಿದ್ದು, ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮೈಸೂರು ನಗರದಾದ್ಯಂತ ಕಾಂಗ್ರೆಸ್ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ʻನುಡಿದಂತೆ ನಡೆದಿದ್ದೇವೆʼ ಎಂಬ ಘೋಷವಾಕ್ಯಗಳ ಬ್ಯಾನರ್‌ಗಳನ್ನು ಹಾಕಲಾಗಿದೆ. ಈಗಾಗಲೇ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಂಡಿದ್ದು, ಮಧ್ಯಾಹ್ನ 12 ಗಂಟೆಗೆ ಯೋಜನೆಗೆ ಚಾಲನೆ ಸಿಗಲಿದೆ.
ವಾಹನ ಸಂಚಾರಕ್ಕೆ ನಿರ್ಬಂಧ
ಕಾಂಗ್ರೆಸ್ ಕಾರ್ಯಕ್ರಮ ನಡೆಯುವ ಮೈಸೂರು ಮಹಾರಾಜ ಕಾಲೇಜು ಸುತ್ತಮುತ್ತ ಸಂಚಾರಕ್ಕೆ ನಿರ್ಭಂಧ ವಿಧಿಸಲಾಗಿದೆ. ಬೆಳಗ್ಗೆ 8ರಿಂದ ಸಂಜೆ 6ರವರೆಗೆ ವಾಹನ ಸಂಚಾರ ನಿರ್ಬಂಧ ವಿಧಿಸಿ ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ. ಕಾರ್ಯಕ್ರಮಕ್ಕರ ಬರುವ ವಾಹನಗಳಿಗೂ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಸುತ್ತಮುತ್ತ ಪಾರ್ಕಿಂಗ್ ವ್ಯವಸ್ಥೆಯನ್ನು ರದ್ದು ಮಾಡಲಾಗಿದೆ.