ಹೊಸದಿಗಂತ ಡಿಜಿಟಲ್ ಡೆಸ್ಕ್:
ಊಟದ ವೇಳೆ ರೊಟ್ಟಿ ಬಡಿಸೋದಕ್ಕೆ ಲೇಟ್ ಆಯ್ತು ಎಂದು ವರನೊಬ್ಬ ಮದುವೆ ಮುರಿದುಕೊಂಡಿದ್ದಾನೆ. ನಂತರ ಅದೇ ಮಹೂರ್ತದಲ್ಲಿ ತನ್ನ ಅತ್ತೆಯ ಮಗಳೊಂದಿಗೆ ಮದುವೆಯಾಗಿದ್ದಾನೆ.
ಈ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ವಧುವಿನ ಕಡೆಯವರು ರೊಟ್ಟಿ ಬಡಿಸಲು ವಿಳಂಬ ಮಾಡಿದರೆಂದು ಕೋಪಗೊಂಡ ವರ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾನೆ. ನಂತರ ಆತ ತನ್ನ ಅತ್ತೆ ಮಗಳನ್ನು ಮದುವೆಯಾಗಿದ್ದಾನೆ.
ವರದಿಗಳ ಪ್ರಕಾರ ಡಿಸೆಂಬರ್ 22 ರಂದು ಈ ಘಟನೆ ನಡೆದಿದ್ದು, ವರ ತನ್ನ ಸ್ನೇಹಿತರೊಂದಿಗೆ ಊಟಕ್ಕೆ ಕುಳಿತ ಸಂದರ್ಭದಲ್ಲಿ ಮದುಮಗನಿಗೆ ವಧುವಿನ ಕುಟುಂಬಸ್ಥರು ರೊಟ್ಟಿ ಬಡಿಸುವಾಗ ವಿಳಂಬ ಮಾಡಿದ್ದು, ಇದನ್ನು ಕಂಡು ಸ್ನೇಹಿತರು ಆತನನ್ನು ಗೇಲಿ ಮಾಡಿದ್ದಾರೆ. ಇದರಿಂದ ಕೋಪಗೊಂಡ ವರ ವಧುವಿನ ಮನೆಯವರನ್ನು ನಿಂದಿಸಿ ಕೊನೆಗೆ ಮದುವೆಯನ್ನೇ ಕ್ಯಾನ್ಸಲ್ ಮಾಡಿ ಹೊರಟು ಹೋಗಿದ್ದಾನೆ. ನ್ಯಾಯಕ್ಕಾಗಿ ವಧುವಿನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ನಾವೆಲ್ಲರೂ ಬೆಳಗ್ಗೆಯೇ ರೆಡಿಯಾಗಿ ಕುಳಿತಿದ್ದೆವು. ಆದರೆ ಆತ ರೊಟ್ಟಿ ಬಡಿಸಲು ತಡವಾಯಿತೆಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ. ಅಷ್ಟೇ ಅಷ್ಟೇ ಅಲ್ಲದೆ ನನ್ನ ಪೋಷಕರನ್ನು ಕೂಡಾ ನಿಂದಿಸಿದ್ದಾನೆ. ಅದಕ್ಕಾಗಿ ನಾನು ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾಯಿತು ಎಂದು ವಧು ಹೇಳಿಕೊಂಡಿದ್ದಾಳೆ.
ಮದುವೆ ಮನೆಗೆ ಸುಮಾರು 200 ಮಂದಿ ಅತಿಥಿಗಳು ಬಂದಿದ್ದರು. ಅತಿಥಿಗಳ ಆತಿಥ್ಯದಿಂದ ಹಿಡಿದು ಊಟದವರೆಗೆ ಸುಮಾರು ಏಳು ಲಕ್ಷ ರೂ. ಖರ್ಷಾಗಿದೆ. ಅಷ್ಟೇ ಅಲ್ಲದೆ ಮದುವೆಯ ದಿನವೇ ವರದಕ್ಷಿಣೆಯ ರೂಪದಲ್ಲಿ 1.5 ಲಕ್ಷ ರೂ.ಗಳನ್ನು ಕೂಡಾ ನೀಡಿದ್ದೇವೆ ಎಂದು ವಧುವಿನ ತಾಯಿ ಆರೋಪಿಸಿದ್ದಾರೆ. ಇದೀಗ ವರ ಬೇರೆ ಮದುವೆಯಾಗಿದ್ದು, ಆತನ ವಿರುದ್ಧ ಎಫ್.ಐ.ಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.