ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಗಂಡು ಮಾಡಿದ ಎಡವಟ್ಟೊಂದು ಮದುವೆ ಮನೆಯಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದ್ದು, ಇಡೀ ಮದುವೆ ಮಂಟಪವೇ ರಣಾಂಗಣವಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಮದುವೆಯೊಂದರಲ್ಲಿ ಮದುವೆ ಗಂಡು ಕುಡಿದು ಬಂದು ಕೋಲಾಹಲ ಸೃಷ್ಟಿಸಿದ್ದು, ವಧುವಿಗೆ ಹಾಕಬೇಕಿದ್ದ ಹಾರವನ್ನು ಆಕೆಯ ಆತ್ಮೀಯ ಗೆಳತಿಗೆ ಹಾಕಿ ಎಡವಟ್ಟು ಮಾಡಿದ್ದಾನೆ. ಈ ಘಟನೆ ಇದೀಗ ಭೀಕರ ತಿರುವು ಪಡೆದುಕೊಂಡಿದ್ದು, ಇಡೀ ಮದುವೆ ಮಂಟಪ ರಣರಂಗವಾಗಿದೆ.
26 ವರ್ಷದ ವರ ರವೀಂದ್ರ ಕುಮಾರ್ ಮತ್ತು 21 ವರ್ಷದ ವಧು ರಾಧಾ ದೇವಿಗೆ ವಿವಾಹ ನಿಶ್ಚಯವಾಗಿತ್ತು. ವರ ರವೀಂದ್ರ ಕುಮಾರ್ ತನ್ನ ಮದುವೆ ಮೆರವಣಿಗೆಯೊಂದಿಗೆ ಸ್ಥಳಕ್ಕೆ ತಡವಾಗಿ ಬಂದಿದ್ದ. ಅಲ್ಲದೆ ಸ್ನೇಹಿತರೊಂದಿಗೆ ಸೇರಿ ಕಂಠಪೂರ್ತಿ ಕುಡಿದಿದ್ದ. ಬಳಿಕ ಮದುವೆ ಮನೆಯಲ್ಲಿ ಕುಡಿದ ಮತ್ತಿನಲ್ಲಿ ವಧುವಿನ ಬದಲು ಆಕೆಯ ಪಕ್ಕದಲ್ಲಿದ್ದ ಆಕೆಯ ಆಪ್ತ ಸ್ನೇಹಿತೆಗೆ ಹೂವಿನ ಹಾರ ಹಾಕಿದ್ದಾನೆ.
ಈ ವೇಳೆ ಮದುವೆಮನೆಯಲ್ಲಿ ಗಲಾಟೆ ಏರ್ಪಟ್ಟಿದ್ದು, ವಧು ವರನಿಗೆ ಕಪಾಳ ಮೋಕ್ಷ ಮಾಡಿದ್ದಲ್ಲದೇ ಮದುವೆಯನ್ನೇ ರದ್ದು ಮಾಡಿದ್ದಾರೆ. ಅಲ್ಲದೆ ಸಂಬಂಧಿಕರು ಪರಸ್ಪರ ಕಿತ್ತಾಡಿಕೊಂಡಿದ್ದು, ಮಂಟಪದಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.