ಬೆಳೆಗಾರರ ‘ಒತ್ತುವರಿದಾರ’ ಹಣೆಪಟ್ಟಿ ತೆಗೆಯಲು ಸರಕಾರ ಬದ್ಧ: ಆರ್.ಅಶೋಕ್

ಹೊಸ ದಿಗಂತ ವರದಿ, ಮಡಿಕೇರಿ:

ಪರಿಸರಕ್ಕೆ ಪೂರಕವಾಗಿ ಮತ್ತು ರಾಜ್ಯ-ರಾಷ್ಟ್ರದ ಆದಾಯವನ್ನು ಹೆಚ್ಚಿಸುವ ಬೆಳೆ ಬೆಳೆಯುವ ಬೆಳೆಗಾರರ ಮೇಲಿನ ‘ಒತ್ತುವರಿದಾರ’ ಎನ್ನುವ ಹಣೆಪಟ್ಟಿಯನ್ನು ತೆಗೆಯುವ ಕಾರ್ಯವನ್ನು ಸರಕಾರ ಮಾಡಲಿದೆ ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಜಿಲ್ಲಾ‌ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ‘ಬೆಳೆಗಾರರ ಸಮಾವೇಶ’ವನ್ನು ಅಡಿಕೆ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ, ಜಿಲ್ಲಾ ವ್ಯಾಪ್ತಿಯಿಂದ ಆಗಮಿಸಿದ್ದ ಬೆಳೆಗಾರರ ಅಹವಾಲುಗಳನ್ನು ಆಲಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಸರ್ಕಾರಿ ಪೈಸಾರಿ ಜಾಗವನ್ನು ಬಳಸಿ ಕಾಫಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಂತಹ ಬೆಳೆಗಾರರ ಒತ್ತುವರಿ ಜಾಗವನ್ನು ‘ಗುತ್ತಿಗೆ’ ಆಧಾರದಲ್ಲಿ ಅವರಿಗೆ ನೀಡುವ ನಿಟ್ಟಿನಲ್ಲಿ ಶೀಘ್ರವೇ ನಿರ್ಧಾರ ಕೈಗೊಂಡು ಕಾನೂನನ್ನು ರೂಪಿಸಲಾಗುತ್ತದೆಂದು ಅವರು ನುಡಿದರು.
ಕೊಡಗು ಜಿಲ್ಲೆಯಲ್ಲಿ 1 ರಿಂದ 3 ಎಕರೆಯಷ್ಟು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿರುವವರ ಸಂಖ್ಯೆ 7374 ಮತ್ತು ಒಟ್ಟು ವಿಸ್ತೀರ್ಣ 10,881 ಎಕರೆ, 3 ರಿಂದ 5 ಎಕರೆ ಒತ್ತುವರಿ ಮಾಡಿರುವವರ ಸಂಖ್ಯೆ 1910 ಮತ್ತು ಒಟ್ಟು ವಿಸ್ತೀರ್ಣ 8149 ಎಕರೆಯಾಗಿದ್ದರೆ, 5 ರಿಂದ 10 ಎಕರೆ ಒತ್ತುವರಿ ಮಾಡಿರುವವರ ಸಂಖ್ಯೆ 415 ಮತ್ತು 10 ರಿಂದ 25 ಎಕರೆ ಒತ್ತುವರಿ ಮಾಡಿರುವವರ ಸಂಖ್ಯೆ 58 ಆಗಿದ್ದು. 5 ಎಕರೆ ಒಳಗೆ ಒತ್ತುವರಿ ಮಾಡಿರುವವರ ಸಂಖ್ಯೆ ಶೇ. 90 ಇದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಅವರು ಒತ್ತುವರಿ ಮಾಡಿರುವ ಜಾಗದಲ್ಲಿ ಎಷ್ಟು ಜಾಗವನ್ನು ಗುತ್ತಿಗೆ ಆಧಾರದಲ್ಲಿ ಎಷ್ಟು ವರ್ಷಕ್ಕೆ ನೀಡಬೇಕು ಎನ್ನುವ ಬಗ್ಗೆ ನಿರ್ಧಾರ ತೆಗೆದುಕೊಂಡು, ಆದಷ್ಟು ಬೇಗನೆ ಕಾನೂನನ್ನು ರೂಪಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲಾಗುವುದೆಂದರು.

ಖಾಲಿ ಜಾಗಗಳಿಗೆ ಅವಕಾಶವಿಲ್ಲ
ಸರ್ಕಾರಿ ಪೈಸಾರಿ ಜಾಗವನ್ನು ಒತ್ತುವರಿ ಮಾಡಿ, ಅದರಲ್ಲಿ ಯಾವುದೇ ಬೆಳೆ ಬೆಳೆಯದೆ ಖಾಲಿ ಉಳಿದಿದ್ದರೆ, ಅಂತಹವುಗಳನ್ನು ಮಂಜೂರು ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಒತ್ತುವರಿಯನ್ನು ಗುತ್ತಿಗೆಯ ಮೇಲೆ ನೀಡುವುದಕ್ಕೆ ಸಂಬಂಧಿಸಿದಂತೆ ಯಾವ ವರ್ಷಕ್ಕಿಂತ ಮುಂಚಿತವಾಗಿ ಕೊಡಬಹುದೆನ್ನುವುದನ್ನು ನಿರ್ಧಾರ ಮಾಡಲಾಗುತ್ತದೆಂದು ಸ್ಪಷಪಡಿಸಿದರು.
ಸ್ಲಾಬ್ ಮಾದರಿಯಲ್ಲಿ ಜಾಗಕ್ಕೆ ತೆರಿಗೆ: ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಪೈಸಾರಿ ಜಾಗವನ್ನು ನೀಡುವ ಸಂದರ್ಭ, ಅವರು ಮಾಡಿರುವ ಒತ್ತುವರಿ ಜಮೀನಿನ ವಿಸ್ತೀರ್ಣವನ್ನು ಆಧರಿಸಿ, ಸ್ಲಾಬ್ ಮಾದರಿಯಲ್ಲಿ ತೆರಿಗೆಯನ್ನು ನಿಗದಿ ಪಡಿಸಲಾಗುವುದೆಂದು ಮಾಹಿತಿಯನ್ನಿತ್ತರು.

ಅಭಿವೃದ್ಧಿಗೆ ಅಗತ್ಯವಿದ್ದಲ್ಲಿ ಜಾಗ ನೀಡುವುದಿಲ್ಲ
ಯಾವುದೇ ಒತ್ತುವರಿ ಜಾಗದಲ್ಲಿ ಆಸ್ಪತ್ರೆ, ಆಶ್ರಯ ಯೋಜನೆ ಮನೆ, ಶಾಲೆ ನಿರ್ಮಾಣ ಮೊದಲಾದ ವಿಚಾರಗಳು ಬಂದಲ್ಲಿ ಹಾಗೂ ಸರ್ಕಾರದ ಕೆಲಸ ಕಾರ್ಯಗಳಿಗೆ ಅಗತ್ಯವಿರುವ ಸಂದರ್ಭಗಳಲ್ಲಿ ಅಂತಹ ಜಾಗವನ್ನು ನೀಡಲು ಬರುವುದಿಲ್ಲವೆಂದು ಕಂದಾಯ ಸಚಿವರು ಸ್ಪಷ್ಟಪಡಿಸಿದರಲ್ಲದೆ, ಗುತ್ತಿಗೆ ನೀಡಿದ್ದರೂ ಅಗತ್ಯ ಸಂದರ್ಭಗಳಲ್ಲಿ ಗುತ್ತಿಗೆಯಲ್ಲಿ ಪಡೆದ ಜಾಗವನ್ನು ಹಿಂದಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವನ್ನು ಕಲ್ಪಿಸಲಾಗುತ್ತದೆಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಎಂಎಲ್‍ಸಿ ಸುಜಾ ಕುಶಾಲಪ್ಪ, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಕೊಡಗು ಜಿಲ್ಲಾ ಬೆಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!