ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾ.ಪಂ‌.ನೌಕರರ ಪ್ರತಿಭಟನೆ

ಹೊಸದಿಗಂತ ವರದಿ, ಕೊಡಗು:

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಿತಿಯ ಪದಾಧಿಕಾರಿಗಳು ಗ್ರಾ.ಪಂ ಸಿಬ್ಬಂದಿಗಳಿಗೆ ಕನಿಷ್ಟ ಕೂಲಿ ನಿಗದಿ ಮಾಡಿ ಐದು ವರ್ಷಗಳಾಗಿದ್ದು, ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಟ ವೇತನವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, 15ನೇ ಹಣಕಾಸು ಯೋಜನೆಯಡಿ ವಾಟರ್ ಮ್ಯಾನ್ ಮತ್ತು ಸ್ವೀಪರ್’ಗಳಿಗೆ, ನರೇಗಾದಲ್ಲಿ ಡಾಟಾ ಎಂಟ್ರಿ ಆಪರೇಟರ್’ಗಳಿಗೆ, ತೆರಿಗೆ ಸಂಗ್ರಹ ವಸೂಲಿಯಲ್ಲಿ ಬಿಲ್ ಕಲೆಕ್ಟರ್ ಮತ್ತು ಎಟೆಂಡರ್’ಗಳಿಗೆ ವೇತನ ಪಾವತಿಸುವಂತೆ ಸರ್ಕಾರ ಆದೇಶಿಸಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಮೃತರಾದರೆ ಅವರ ಕುಟುಂಬದಲ್ಲಿ ಒಬ್ಬರಿಗೆ ನೇಮಕಾತಿ ಮಾಡುವುದು, ನಿವೃತ್ತಿ ಉಪಧನ, ಕೋವಿಡ್‍ನಿಂದ ಮೃತಪಟ್ಟವರಿಗೆ ವಿಮಾ ಪರಿಹಾರ ಒದಗಿಸುವ ಕುರಿತು ಸರ್ಕಾರ ಆದೇಶ ನೀಡಿದ್ದರೂ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಈ ಆದೇಶಗಳನ್ನು ಇನ್ನೂ ಜಾರಿಗೊಳಿಸಿಲ್ಲ. ಆದ್ದರಿಂದ ಸಂಬಂಧಪಟ್ಟ ಪಿಡಿಓಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕನಿಷ್ಟ ವೇತನ ನಿಗದಿ ಮಾಡಿ ಐದು ವರ್ಷ ಮುಗಿದಿರುವುದರಿಂದ ಗ್ರಾ.ಪಂ ಸಿಬ್ಬಂದಿಗಳಾದ ಕರವಸೂಲಿಗಾರ, ಗುಮಾಸ್ತ, ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್’ಗ ರೂ.38,021.86, ವಾಟರ್ ಮ್ಯಾನ್, ಪಂಪ್ ಅಪರೇಟರ್ ಕಂ ಮೆಕ್ಯಾನಿಕ್‍ಗಳಿಗೆ ರೂ.33,067.50, ಎಟೆಂಡರ್, ಜವಾನರಿಗೆ ರೂ.28,750, ಕಸ ಗುಡಿಸುವವರು ಸ್ವೀಪರ್’ಗಳಿಗೆ ರೂ.25 ಸಾವಿರ ಕನಿಷ್ಟ ವೇತನ ನಿಗದಿಪಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಸಮಿತಿಯ ಜಿಲ್ಲಾ ಖಜಾಂಚಿ ಎಂ.ಕೆ.ವಸಂತ್, ಸದಸ್ಯ ಬಿ.ಕೆ.ಜತ್ತಪ್ಪ ಮತ್ತಿತರರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!