ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ದಾಖಲೆ ಬರೆದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸುವ ಮೂಲಕ ಆರ್‌ಸಿಬಿ ಎರಡನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ. ಆದರೆ, ಈ ರೋಚಕ ಪಂದ್ಯವು ಕೇವಲ ರನ್‌ಗಳ ಮಳೆಗಷ್ಟೇ ಅಲ್ಲದೆ, ಆಟಗಾರರ ನಡುವಿನ ತೀವ್ರ ವಾಕ್ಸಮರಕ್ಕೂ ಸಾಕ್ಷಿಯಾಯಿತು.
ಮೈದಾನದಲ್ಲೇ ತೀವ್ರಗೊಂಡ ಆಟಗಾರರ ಮಾತಿನ ಚಕಮಕಿ
ಪಂದ್ಯದುದ್ದಕ್ಕೂ ಉಭಯ ತಂಡಗಳ ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬಂತು. ಮೊದಲು ಮೊಹಮ್ಮದ್ ಸಿರಾಜ್ ಹಾಗೂ ವೆಂಕಟೇಶ್ ಅಯ್ಯರ್ ನಡುವೆ ಮೈದಾನದಲ್ಲಿ ಮಾತಿನ ಚಕಮಕಿ ನಡೆಯಿತು. ಇದಾದ ಬೆನ್ನಲ್ಲೇ, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಕಿಂಗ್ ವಿರಾಟ್ ಕೊಹ್ಲಿ ಅವರನ್ನು ಕೆಣಕಲು ಗುಜರಾತ್ ಟೈಟಾನ್ಸ್ ತಂಡದ ಫೀಲ್ಡರ್ ಸಾಯಿ ಸುದರ್ಶನ್ ಯತ್ನಿಸಿದರು.
ಆರ್‌ಸಿಬಿ ಬ್ಯಾಟಿಂಗ್ ಮಾಡುತ್ತಿದ್ದಾಗ ಫ್ರಂಟ್ ಫೀಲ್ಡಿಂಗ್‌ನಲ್ಲಿದ್ದ ಸಾಯಿ ಸುದರ್ಶನ್, ವಿರಾಟ್ ಕೊಹ್ಲಿ ಅವರನ್ನು ಗುರಿಯಾಗಿಸಿಕೊಂಡು ಏನೋ ಕಾಮೆಂಟ್ ಮಾಡಿದ್ದರು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಕೊಹ್ಲಿ ಕಟು ಶಬ್ದಗಳಲ್ಲೇ ತಿರುಗೇಟು ನೀಡಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸಾಯಿ ಸುದರ್ಶನ್, ಕೊಹ್ಲಿ ಬಳಿ ಬಂದು ಕ್ಷಮೆ ಕೇಳಲು ಅಥವಾ ಸಮಜಾಯಿಷಿ ನೀಡಲು ಮುಂದಾದರು.
ಸುದರ್ಶನ್‌ಗೆ ಸರಿಯಾದ ಪಾಠ ಕಲಿಸಿದ ಕಿಂಗ್ ಕೊಹ್ಲಿ!
ಆದರೆ, ಸುದರ್ಶನ್ ಅವರ ವರ್ತನೆಯಿಂದ ತೀವ್ರ ಅಸಮಾಧಾನಗೊಂಡಿದ್ದ ವಿರಾಟ್ ಕೊಹ್ಲಿ ಸುಮ್ಮನಾಗಲಿಲ್ಲ. ಅವರು ಸಾಯಿ ಸುದರ್ಶನ್‌ಗೆ ಮುಟ್ಟಿ ನೋಡಿಕೊಳ್ಳುವಂತಹ ಖಡಕ್ ಉತ್ತರ ನೀಡಿದರು. ಸುಖಾಸುಮ್ಮನೆ ಕೊಹ್ಲಿ ಜೊತೆ ಜಗಳಕ್ಕೆ ಬಂದು ಪೇಚಿಗೆ ಸಿಲುಕಿದ ಗುಜರಾತ್ ಆಟಗಾರ, ನಂತರ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ ಅಷ್ಟರಲ್ಲಾಗಲೇ ಅವರಿಗೆ ಸಿಗಬೇಕಾದ ಸೂಕ್ತ ‘ಕ್ಲಾಸ್’ ಸಿಕ್ಕಿತ್ತು. ಸದ್ಯ ಈ ಇಡೀ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಆರ್‌ಸಿಬಿ ಅಭಿಮಾನಿಗಳು ಸಾಯಿ ಸುದರ್ಶನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆರ್‌ಸಿಬಿಗೆ 5 ವಿಕೆಟ್‌ಗಳ ಭರ್ಜರಿ ಜಯ
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ಓವರ್‌ಗಳಲ್ಲೇ 5 ವಿಕೆಟ್ ನಷ್ಟಕ್ಕೆ 161 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು. ಈ ಅಮೋಘ ಗೆಲುವಿನೊಂದಿಗೆ ಆರ್‌ಸಿಬಿ ಫ್ರಾಂಚೈಸಿ ಐಪಿಎಲ್ ಇತಿಹಾಸದಲ್ಲಿ 2ನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಸಂಭ್ರಮಿಸಿದೆ.



