ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್ ಮಾಲ್ ಏಳು ದಿನಗಳ ಕಾಲ ಬಂದ್ ಆಗಲಿದೆ.
ಈ ಕುರಿತು ಮಾಲ್ನ ಮಾಲೀಕರ ಪುತ್ರ ಪ್ರಶಾಂತ್ ಅವರು ಸುದ್ದಿಗೋಷ್ಠಿ ನಡೆಸಿ ಆಗಿರುವ ಘಟನೆಗೆ ಕ್ಷಮೆ ಕೋರಿದರಲ್ಲದೆ, ನಗರಾಭಿವೃದ್ಧಿ ಸಚಿವರ ಸೂಚನೆ ಪ್ರಕಾರ ಏಳು ದಿನಗಳ ಕಾಲ ಬಂದ್ ಮಾಡುವುದಾಗಿ ಹೇಳಿದ್ದಾರೆ.
ಪಂಚೆ ಧರಿಸಿ ಬಂದ ರೈತರೊಬ್ಬರಿಗೆ ಮಾಲ್ ಒಳಗೆ ಬಿಡದೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಜಿಟಿ ವರ್ಲ್ಡ್ ಮಾಲ್ ವಿವಾದದ ಕೇಂದ್ರ ಬಿಂದುವಾಗಿತ್ತು. ಮಾಲ್ ಒಂದು ವಾರ ಕಾಲ ಮುಚ್ಚಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸದನದಲ್ಲಿ ಗುಡುಗಿದ್ದರು. ಇದೀಗ ಮಾಲೀಕರೆ ಸಮ್ಮತಿಸಿದ್ದಾರೆ.
ನಮ್ಮ ಮಾಲ್ ನಡೆಯಬಾರದಂಥ ಘಟನೆ ನಡೆದಿದೆ. ಹೊಸ ಸಿಬ್ಬಂದಿಯಿಂದ ಪ್ರಮಾದವಾಗಿದೆ. ಮಾಲ್ನ ಮಾಲೀಕನಾಗಿ ನಾನು ಈ ಘಟನೆಗೆ ಕ್ಷಮೆ ಕೇಳುತ್ತಿದ್ದೇನೆ. ತಪ್ಪು ಮಾಡಿದ ಸಿಬ್ಬಂದಿಯನ್ನ ಕೆಲಸದಿಂದ ತೆಗೆದಿದ್ದೇವೆ. ಈ ರೀತಿಯ ಅಪಮಾನ ನಡೆಯಬಾರದಿತ್ತು. ನಮ್ಮ ತಂದೆಯವರೂ ಮಾತಾಡಿ ಕ್ಷಮೆ ಕೇಳಿದ್ದಾರೆ ಎಂದು ಪ್ರಶಾಂತ್ ಅವರು ಹೇಳಿದರು.
ನಮಗೆ ಬಿಬಿಎಂಪಿ ಕಡೆಯಿಂದ ನೋಟಿಸ್ ಜಾರಿಯಾಗಿದೆ. ನಡೆದಿರುವ ಘಟನೆ ಬಗ್ಗೆ ಮಾಹಿತಿ ಕೊಡಿ ಅಂತಾ ನೋಟಿಸ್ ಕೊಟ್ಟಿದ್ದಾರೆ. ಒಂದು ವರ್ಷದ 1. 70 ಕೋಟಿ ತೆರಿಗೆ ಬಾಕಿ ಇದೆ. ಆದರೆ, ಪಾಲಿಕೆ ಘಟನೆ ಬಗ್ಗೆ ಮಾಹಿತಿ ಕೊಡಿ ಅಂತಾ ನೋಟಿಸ್ ಕೊಟ್ಟಿದೆ. ಇದೀಗ ನಾವು ಸ್ವಯಂಪ್ರೇರಿತವಾಗಿ ಕ್ಲೋಸ್ ಮಾಡುತ್ತಿದ್ದೇವೆ ಎಂದು ಪ್ರಶಾಂತ್ ಹೇಳಿದ್ದಾರೆ.
ಮುಂದಿನ ಸೂಚನೆ ಬರೋ ತನಕ ಮಾಲ್ ಬಂದ್ ಮಾಡ್ತೀವೆ. ಬಿಬಿಎಂಪಿಗೆ ಘಟನೆ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಫಕೀರಪ್ಪ ಅವರನ್ನು ವೈಯಕ್ತಿಕವಾಗಿ ಕರೆದು ಕ್ಷಮೆ ಕೇಳಿದ್ದೇವೆ. ಈ ಬಗ್ಗೆ ವಿಮರ್ಶೆ ನಡೆಸಲು ನಮಗೆ 2-3 ದಿನ ಕಾಲಾವಕಾಶ ಬೇಕಾಗಿದೆ. ಇನ್ನಷ್ಟು ವಿವರಣೆ ನೀಡಲು 2ರಿಂದ 3 ದಿನ ಸಮಯ ಬೇಕಾಗುತ್ತದೆ ಎಂದು ಪ್ರಶಾಂತ್ ಹೇಳಿದರು.
ಗೇಟ್ ಬಾಗಿಲು ಬಂದ್
ಜಿಟಿ ಮಾಲ್ ಅನ್ನು ಅಧಿಕಾರಿಗಳು ಬಂದ್ ಮಾಡುವ ಮೊದಲೇ ಅಲ್ಲಿನ ಸಿಬ್ಬಂದಿಗಳೇ ಬಂದ್ ಮಾಡಿಸಿದ್ದಾರೆ. ಮಳಿಗೆಗಳ ಬಳಿಗೆ ತೆರಳಿದ ಮಾಲ್ ಸಿಬ್ಬಂದಿ ಅಂಗಡಿ ಬಂದ್ ಮಾಡುವಂತೆ ಕೋರಿದ್ದಾರೆ. ಅದೇ ರೀತಿ ಒಳಗಿರುವ ಪಿವಿಆರ್ ಸಿನಿಮಾ ಮಂದಿಗಳನ್ನು ಒಂದೊಂದಾಗಿ ಬಂದ್ ಮಾಡಿಸಲಾಗಿದೆ. ಸಿನಿಮಾ ಚಾಲನೆಯಲ್ಲಿರುವ ಸ್ಕ್ರಿನ್ ಬಿಟ್ಟು ಉಳಿದೆಲ್ಲ ಸ್ಕ್ರೀನ್ಗಳನ್ನು ಬಂದ್ ಮಾಡಿಸಲಾಗಿದೆ. ಜತೆಗೆ ಒಳಗಿರುವ ಎಲ್ಲ ಗ್ರಾಹಕರನ್ನು ಹೊರಕ್ಕೆ ಕಳುಹಿಸಲಾಗಿದೆ.