ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 2 ದಿನಗಳಿಂದ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಸಗಟು ದರ ಏರಿಕೆಯಾಗುತ್ತಿದ್ದು, ಹೀಗೆ ಮುಂದುವರಿದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ 100 ರು. ಆಗುವ ಎಲ್ಲ ಸಾಧ್ಯತೆಗಳಿವೆ.
ಗುರುವಾರ ನಗರದ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಗರಿಷ್ಠ ಕೆಜಿಗೆ 70- 80 ರು. ವರೆಗೆ ಮಾರಾಟವಾಗಿದೆ. ಆದರೆ ಕೆಜಿಗೆ 40 ರು. ಈರುಳ್ಳಿಯೂ ಸಿಗುತ್ತಿದೆ.
ಆದರೆ, ಇದು ತೀರಾ ಕಳಪೆ ಗುಣಮಟ್ಟದಿಂದ ಕೂಡಿವೆ. ಮುಂದಿನ 15 ದಿನಗಳಲ್ಲಿ ಇನ್ನಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಎಪಿಎಂಸಿಗೆ 100480 ಚೀಲ ಈರುಳ್ಳಿ ಬಂದಿದೆ. ಮಹಾರಾಷ್ಟ್ರದಿಂದ ಬಂದಿರುವ 8-10 ಲಾರಿ ಹಳೇ ದಾಸ್ತಾನಿನ ಈರುಳ್ಳಿ ಗುಣಮಟ್ಟದಿಂದ ಕೂಡಿದೆ. ಕ್ವಿಂಟಲ್‌ಗೆ ಗರಿಷ್ಠ 7200 ರು. ರಿಂದ 7500 ರು. ಹಾಗೂ ಕನಿಷ್ಠ 3500 ರು. ರಿಂದ 5000 ರು. ಬೆಲೆಯಲ್ಲಿವೆ. ಕರ್ನಾಟಕದಿಂದ 500 ಕ್ಕೂ ಹೆಚ್ಚು ಲಾರಿಗಳು ಬಂದಿದ್ದರೂ ತೀರಾ ಕಳಪೆಯಾಗಿದ್ದು, ಕ್ವಿಂಟಲ್‌ಗೆ ಕನಿಷ್ಠ 1500 ರು.ರಿಂದ ಗರಿಷ್ಠ 5500 ರು. ಎಂದು ವರ್ತಕರು ತಿಳಿಸಿದ್ದಾರೆ.