ಬಕ್ರಿದ್ ಹಬ್ಬಆಚರಣೆಗೆ ರಾಜ್ಯ ಸರಕಾರದಿಂದ ಗೈಡ್ ಲೈನ್ ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರಿದ್ ಹಬ್ಬದ ಆಚರಣೆಗಾಗಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಕೋವಿಡ್ ಸಂಖ್ಯೆಯ ಏರಿಕೆಯ ನಡುವೆಯೂ ಬಕ್ರೀದ್ ಹಬ್ಬವನ್ನು ಕೆಲ ನಿಯಮಗಳನ್ನು ಪಾಲಿಸಿಕೊಂಡು ಆಚರಿಸುವಂತೆ ಸೂಚಿಸಲಾಗಿದೆ.

ಈ ಸಂಬಂಧ ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಮುಸ್ಲಿಂ ಬಾಂಧವರ ಎರಡನೇ ಪ್ರಮುಖ ಹಬ್ಬವಾದ ಬಕ್ರೀದ್ ( ಈದ್ – ಉಲ್-ಆಝ್ ಹಾ ) ಹಬ್ಬವನ್ನು ಜುಲೈ.10, 2022ರ ಭಾನುವಾರದಂದು ರಾಜ್ಯಾಧ್ಯಂತ ಆಚರಿಸಲಾಗುವುದೆಂದು ರಾಜ್ಯ ಚಂದ್ರದರ್ಶನ ಸಮಿತಿ ಘೋಷಿಸಿರುತ್ತದೆ ಎಂದಿದ್ದಾರೆ.
ಪವಿತ್ರ ಬಕ್ರೀದ್ ಹಬ್ಬವನ್ನು ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯದೊಂದಿಗೆ ಆಚರಣೆ ಮಾಡಬೇಕಾಗಿರುವುದರಿಂದ, ಈ ಕೆಳಕಂಡ ಮಾರ್ಗಸೂಚಿ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.
ಮಾರ್ಗಸೂಚಿ ಕ್ರಮಗಳು
ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಕೋವಿಡ್-19 ನಿಯಂತ್ರಣ ಮಾರ್ಗಸೂಚಿಗಳನ್ನು ಕಡ್ಡಾಯ
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಾರ್ವತ್ರಿಕ ಅಧಿನಿಯ 2020ರ ನಿಯಮಗಳು ಉಲ್ಲಂಘನೆಯಾಗದಂತೆ ಖುರ್ಬಾನಿಯನ್ನು ನೆರವೇರಿಸುವುದು
ಖುರ್ಬಾನಿಯನ್ನು ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಆವರಣ, ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಿದೆ.
ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸಂಸ್ಥೆಗಳಿಂದ ನಿಗದಿಪಡಿಸಲಾದ ಸ್ಥಳಗಳಲ್ಲಿ ಮಾತ್ರ ಖುರ್ಬಾನಿಯನ್ನು ನೆರವೇರಿಸತಕ್ಕದ್ದು.
ಖುರ್ಬಾನಿಯನ್ನು ನೆರವೇರಿಸುವಾಗ ಶುಚಿತ್ವ ಮತ್ತು ನೈರ್ಮಲ್ಯವನ್ನು ಕಡ್ಡಾಯ
ಪ್ರಾಣಿ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು
ಸಾಮಾನ್ಯ ಹಾಗೂ ಸ್ಥಳೀಯವಾಗಿ ನೀಡುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
ಬಕ್ರೀದ್ ಹಬ್ಬದ ಆಚರಣೆ ಕುರಿತು ರಾಜ್ಯ ಸರ್ಕಾರ, ಜಿಲ್ಲಾಡಳಿತ ಹೊರಡಿಸುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!