ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾ ಪ್ರಕರಣ ಬೆನ್ನಲ್ಲೇ ಎಚ್ಚತ್ತ ರಾಜ್ಯ ಸರಕಾರ, ಮೆಡಿಕಲ್ ಕಾಲೇಜುಗಳಿಗೆ ಶೀಘ್ರವೇ ಮಾರ್ಗಸೂಚಿ ಪ್ರಕಟ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ ಪ್ರತ್ಯೇಕ ಮಾರ್ಗಸೂಚಿ ಜಾರಿ ಮಾಡಲು ನಿರ್ಧರಿಸಿದೆ. ಶೀಘ್ರವೇ ಮಾರ್ಗಸೂಚಿ ಪ್ರಕಟ ಮಾಡುತ್ತೇವೆ ಎಂದಿದ್ದಾರೆ.
ಎಲ್ಲಾ ವೈದ್ಯಕೀಯ ಕಾಲೇಜುಗಳ ನಿರ್ದೇಶಕರಿಗೆ ಹೊಸ ಮಾರ್ಗಸೂಚಿ ಪ್ರಕಟ ಮಾಡುವ ಕುರಿತು ಮಾಹಿತಿ ನೀಡಲಾಗಿದೆ. ಮೆಡಿಕಲ್ ಕಾಲೇಜುಗಳ ಅಸೋಸಿಯೇಷನ್‌ಗಳ ಜೊತೆ ಸಭೆ ನಡೆಸಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ಕೊಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳೆಯರ ಸುರಕ್ಷತೆ, ಮೂಲಭೂತ ಸೌಕರ್ಯಗಳ ವ್ಯವಸ್ಥೆ, ಕೆಲಸದ ಅವಧಿ ಸೇರಿ ಇನ್ನಿತರ ಅಗತ್ಯ ಕ್ರಮಗಳನ್ನು ಪರಿಗಣನೆಗೆ ತೆಗೆದುಕೊಂಡು ಅಸೋಸಿಯೇಷನ್ ಜೊತೆ ಸಭೆ ನಡೆಸಿ ವರದಿ ನೀಡಲು ಈಗಾಗಲೇ ಸೂಚನೆ ನೀಡಿದ್ದೇವೆ. ಸಭೆ ನಡೆಸಿ ವರದಿ ಕೊಟ್ಟ ಬಳಿಕ ಸರ್ಕಾರ ಅದರ ಬಗ್ಗೆ ಪರಿಶೀಲನೆ ಮಾಡುತ್ತದೆ. ಅದಾದ ಬಳಿಕ ಮಾರ್ಗಸೂಚಿಯನ್ನು ಪ್ರಕಟ ಮಾಡಲಾಗುವುದು. ಸರ್ಕಾರ ಹೊರಡಿಸುವ ಮಾರ್ಗಸೂಚಿ ಖಾಸಗಿ ಮೆಡಿಕಲ್ ಕಾಲೇಜುಗಳಿಗೂ ಅನ್ವಯ ಆಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.