ಹೊಸದಿಗಂತ ವರದಿ ಬೆಳಗಾವಿ:
ವಿಶ್ವದ ಅತಿ ಕಿರಿಯ ಎತ್ತರದ ಮಹಿಳೆ ಎಂಬ ‘ಗಿನ್ನಿಸ್ ದಾಖಲೆ’ಗೆ ಭಾಜನರಾಗಿರುವ 22 ವರ್ಷದ ಜ್ಯೋತಿ ಅವರು ಗುರುವಾರ ಕುಂದಾನಗರಿ ಬೆಳಗಾವಿಯ ಮಹಾನಗರ ಪಾಲಿಕೆಗೆ ದಿಢೀರ್ ಭೇಟಿ ನೀಡಿ ಎಲ್ಲರ ಗಮನ ಸೆಳೆದರು.
ಇಲ್ಲಿಯವರೆಗೆ ಕೇವಲ ಕಿರುತೆರೆ ಹಾಗೂ ಟಿವಿ ಶೋಗಳಲ್ಲಿ ಮಾತ್ರ ನೋಡುತ್ತಿದ್ದ ಜ್ಯೋತಿ ಅವರನ್ನು ನೇರವಾಗಿ ಕಣ್ಣುಂಬಿಕೊಳ್ಳುವ ಭಾಗ್ಯ ಬೆಳಗಾವಿ ಜನತೆಗೆ ಸಿಕ್ಕಿತು.
ಖಾಸಗಿ ಶೋರೂಂ ಒಂದರ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸಿದ್ದ ಜ್ಯೋತಿ, ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಗೆ ಭೇಟಿ ನೀಡಿದರು. ಪಾಲಿಕೆ ಆಯುಕ್ತ ಎಂ. ಕಾರ್ತಿಕ್ ಹಾಗೂ ಮೇಯರ್ ಪ್ರೀತಿ ಕಾಮಕರ್ ಅವರನ್ನು ಭೇಟಿಯಾಗಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು. ಕೇವಲ 2 ಅಡಿ ಎತ್ತರವಿರುವ ಜ್ಯೋತಿ ಅವರನ್ನು ಪ್ರತ್ಯಕ್ಷವಾಗಿ ಕಂಡ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಒಂದು ಕ್ಷಣ ಆಶ್ಚರ್ಯಚಕಿತರಾಗಿ, ಬಳಿಕ ಸಂತಸ ವ್ಯಕ್ತಪಡಿಸಿದರು.
ಶಾರೀರಿಕ ಬೆಳವಣಿಗೆ ಸಣ್ಣದು, ಸಾಧನೆ ದೊಡ್ಡದು: ಮೇಯರ್ ಪ್ರೀತಿ ಕಾಮಕರ್
ಈ ವೇಳೆ ಮಾತನಾಡಿದ ಮೇಯರ್ ಪ್ರೀತಿ ಕಾಮಕರ್, “ನಾವು ಜ್ಯೋತಿ ಅವರನ್ನು ಟಿವಿ ಶೋಗಳಲ್ಲಿ ನೋಡುತ್ತಿದ್ದೆವು. ಇಂದು ಅವರನ್ನು ನೇರವಾಗಿ ಭೇಟಿಯಾಗುತ್ತಿರುವುದು ನಮಗೆ ಅತ್ಯಂತ ಸಂತಸ ತಂದಿದೆ. ಜ್ಯೋತಿ ಅವರ ಶಾರೀರಿಕ ಬೆಳವಣಿಗೆ ಕೇವಲ ಎರಡು ಅಡಿ ಇರಬಹುದು, ಆದರೆ ಜಾಗತಿಕ ಮಟ್ಟದಲ್ಲಿ ಅವರು ಮಾಡಿರುವ ಸಾಧನೆ ಅತ್ಯಂತ ದೊಡ್ಡದು” ಎಂದು ಹರ್ಷ ವ್ಯಕ್ತಪಡಿಸಿದರು.

ಬೆಳಗಾವಿ ನಗರ ಮತ್ತು ಜನರ ಪ್ರೀತಿ ಮನಸ್ಸಿಗೆ ತಟ್ಟಿದೆ: ಜ್ಯೋತಿ
ಪಾಲಿಕೆ ಭೇಟಿಯ ಕುರಿತು ಮಾತನಾಡಿದ ಜ್ಯೋತಿ, “ನಾನು ಬೆಳಗಾವಿ ನಗರಕ್ಕೆ ಮೊದಲ ಬಾರಿಗೆ ಆಗಮಿಸಿದ್ದೇನೆ. ಈ ಸುಂದರ ನಗರವನ್ನು ವೀಕ್ಷಿಸುವುದು ಮತ್ತು ಇಲ್ಲಿನ ಆತ್ಮೀಯ ಜನರನ್ನು ಭೇಟಿಯಾಗುವುದು ನನಗೆ ಸಿಕ್ಕ ದೊಡ್ಡ ಅವಕಾಶ. ಶೋರೂಂ ಉದ್ಘಾಟನೆಗೆ ಬಂದಿದ್ದ ನಾನು, ಬೆಳಗಾವಿ ಮಹಾನಗರ ಪಾಲಿಕೆಗೂ ಭೇಟಿ ನೀಡಬೇಕೆಂಬ ಆಸೆಯಿಂದ ಇಲ್ಲಿಗೆ ಬಂದೆ.
ಪಾಲಿಕೆಯ ಎಲ್ಲರೂ ನನ್ನನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿ, ನನ್ನೊಂದಿಗೆ ಫೋಟೋ ತೆಗೆಸಿಕೊಂಡರು. ಬೆಳಗಾವಿಯ ಜನರ ಅನ್ಯೋನ್ಯತೆ ನನಗೆ ತುಂಬಾ ಇಷ್ಟವಾಯಿತು” ಎಂದರು.



