ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾನುವಾರ ಗುಜರಾತ್‌ನ ಮೊರ್ಬಿ ನಗರದಲ್ಲಿ ಸೇತುವೆ ಕುಸಿದು ಕನಿಷ್ಠ 60 ಮಂದಿ ಸಾವನ್ನಪ್ಪಿದ ದುರಂತ ಘಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಉನ್ನತ ನಾಯಕರು ದುಃಖ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಂಬನಿ ಮಿಡಿದಿರುವ ಪ್ರಧಾನಿ ಮೋದಿ, ಘಟನೆ ಸಂಬಂಧ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. “ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ತ್ವರಿತವಾಗಿ ನಡೆಯುತ್ತಿವೆ ಮತ್ತು ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುತ್ತಿದೆ” ಎಂದು ಪ್ರಧಾನಿ ಹೇಳಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮೊರ್ಬಿಯಲ್ಲಿ ನಡೆದ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಗುಜರಾತ್‌ನ ಗೃಹ ಸಚಿವ ಹರ್ಷ್ ಸಾಂಘ್ವಿ ಮತ್ತು ಇತರ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಸ್ಥಳೀಯ ಆಡಳಿತವು ಪರಿಹಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಕೂಡ ಶೀಘ್ರದಲ್ಲೇ ಸ್ಥಳಕ್ಕೆ ತಲುಪುತ್ತಿದೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡುವಂತೆ ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಶಾ ಹೇಳಿದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ʼದೇವರು ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ. “ಗುಜರಾತ್ ನಿಂದ ಬಹಳ ದುಃಖದ ಸುದ್ದಿ ಬರುತ್ತಿದೆ. ನಂತರ ಅನೇಕ ಜನರು ನದಿಗೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಮೋರ್ಬಿಯಲ್ಲಿ ಸೇತುವೆಯೊಂದು ಕುಸಿದಿದೆ. ಪ್ರತಿಯೊಬ್ಬರ ಜೀವನ ಮತ್ತು ಯೋಗಕ್ಷೇಮಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ.” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಮೃತರ ಕುಟುಂಬಕ್ಕೆ ತಲಾ 4 ಲಕ್ಷ ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ.
ಗುಜರಾತ್‌ನ ಮೋರ್ಬಿಯಲ್ಲಿ ತೂಗುಸೇತುವೆ ಕುಸಿದು ಬಿದ್ದಿರುವ ದುರಂತದಿಂದ ನಮಗೆ ಅತೀವ ದುಃಖವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಟ್ವೀಟ್ ಮಾಡಿದ್ದಾರೆ. ಗುಜರಾತ್‌ನ ಮೋರ್ಬಿಯಲ್ಲಿ ಸೇತುವೆ ಅಪಘಾತದ ಸುದ್ದಿ ತುಂಬಾ ದುಃಖಕರವಾಗಿದೆ ಎಂದು ರಾಹುಲ್ ಗಾಂಧಿ ಕಂಬನಿ ಮಿಡಿದಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ