ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಜ್ಜಾಗಿದ್ದು, ರಾಜ್ಯದಲ್ಲಿ ಪ್ರಬಲ ಆಡಳಿತವಿರುವ ಬಿಜೆಪಿಯನ್ನು ಮಣಿಸಲು ತಂತ್ರ ರೂಪಿಸುತ್ತುದೆ. ಪಕ್ಷದ ಕಾರ್ಯಕರ್ತರಲ್ಲಿ ಚೈತನ್ಯ ತುಂಬಲು ಕಾಂಗ್ರೆಸ್ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ನಾಳೆಯಿಂದ ಗುಜರಾತ್ ಪರಿವರ್ತನ ಸಂಕಲ್ಪ ಯಾತ್ರೆ ಆರಂಭಿಸಲಿದೆ. ಸೋಮವಾರದಿಂದಲೇ ಈ ಕಾರ್ಯಕ್ರಮ ಆರಂಭವಾಗಬೇಕಿತ್ತು ಆದರೆ ಭಾನುವಾರ ರಾತ್ರಿ ಮೊರ್ಬಿ ಸೇತುವೆ ದುರಂತದ ಹಿನ್ನೆಲೆಯಲ್ಲಿ ಯಾತ್ರೆಯನ್ನು ಮಂಗಳವಾರಕ್ಕೆ ಮುಂದೂಡುವುದಾಗಿ ಕಾಂಗ್ರೆಸ್ ಘೋಷಿಸಿದೆ.
ಇದಕ್ಕೂ ಮುನ್ನ ಅಕ್ಟೋಬರ್ 31 (ಸೋಮವಾರ) ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನದ ಸ್ಮರಣಾರ್ಥವಾಗಿ ವಡ್ಗಾಮ್, ಭುಜ್, ಸೋಮಂತ್, ಫಗ್ವೆಲ್ ಮತ್ತು ಜಂಬೂಸರ್‌ನಿಂದ ಯಾತ್ರೆಯನ್ನು ಪ್ರಾರಂಭಿಸಲು ಪಕ್ಷವು ಯೋಜಿಸಿತ್ತು. ಅನಿರೀಕ್ಷಿತ ಕಾರಣಗಳಿಂದ ಸೋಮವಾರ ಪ್ರವಾಸವನ್ನು ಮುಂದೂಡಲಾಯಿತು. ಕಾಂಗ್ರೆಸ್ ಪಕ್ಷದ ಆಶ್ರಯದಲ್ಲಿ ನಡೆಯಲಿರುವ ಗುಜರಾತ್ ಪರಿವರ್ತನ ಸಂಕಲ್ಪ ಯಾತ್ರೆಯಲ್ಲಿ 145 ಸಾರ್ವಜನಿಕ ಸಭೆ, 95 ರ್ಯಾಲಿಗಳು ನಡೆಯಲಿವೆ. ಸಾವಿರಾರು ಜನರೊಂದಿಗೆ 5,432 ಕಿ.ಮೀ ಪ್ರಯಾಣ ‘ನೇರ ಸಂಪರ್ಕ’ ಸ್ಥಾಪಿಸುವುದು ಗುರಿಯಾಗಿದೆ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಠಾಕೂರ್ ಹೇಳಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗವಹಿಸಲಿದ್ದು, ವಿರೋಧ ಪಕ್ಷ ಅಧಿಕಾರಕ್ಕೆ ಬಂದರೆ 11 ಭರವಸೆಗಳನ್ನು ಈಡೇರಿಸಲಿದೆ ಎಂದು ಜನರಿಗೆ ತಿಳಿಸಲು ಯೋಜಿಸಲಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ದಿಗ್ವಿಜಯ್ ಸಿಂಗ್, ಕಮಲ್ ನಾಥ್, ಕಾಂಗ್ರೆಸ್ ಶಾಸಕ ಸಚಿನ್ ಪೈಲಟ್ ಮತ್ತು ಪಕ್ಷದ ಹಲವು ಹಿರಿಯ ನಾಯಕರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ದಿಗ್ವಿಜಯ್ ಸಿಂಗ್ ಭುಜ್-ರಾಜ್‌ಕೋಟ್ ಯಾತ್ರೆಯನ್ನು ಪ್ರಾರಂಭಿಸಿದರೆ, ಕರ್ನಾಟಕದ ನಾಯಕರು ಸೋಮನಾಥ ಪಾದಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ.