ಹೊಸದಿಗಂತ ಡಿಜಿಟಲ್ ಡೆಸ್ಕ್
ಐಪಿಎಲ್ 2022 ರ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, ಇದೀಗ ರೋಚಕ ಪ್ಲೇ ಆಫ್ ಹಂತಕ್ಕೆ ಕಾಲಿಟ್ಟಿದೆ. ಅಂತಮ ಘಟ್ಟ ಪ್ರವೇಶಿಸಿರುವ ನಾಲ್ಕು ತಂಡಗಳು ಇಂದಿನಿಂದ ಪ್ರಶಸ್ತಿ ಎತ್ತಿಹಿಡಿಯಲು ಜಿದ್ದಾಜಿದ್ದಿನ ಹೋರಾಟ ನಡೆಸಲಿವೆ.
ಇಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್‌ಗೆ ಐಪಿಎಲ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಪ್ಲೇ ಆಫ್ ಹಂತ ಪ್ರವೇಶಿಸಿದ್ದರೆ, ರಾಜಸ್ಥಾನ್ ರಾಯಲ್ಸ್ ತಂಡವು ದ್ವಿತೀಯ ಸ್ಥಾನಿಯಾಗಿ ಲಗ್ಗೆ ಇಟ್ಟಿದೆ.
ಇಂದು ನಡೆಯುವ ಪಂದ್ಯದಲ್ಲಿ ಗೆಲ್ಲುವ ತಂಡವು ಫೈನಲ್ ಪ್ರವೇಶಿಸಲಿದೆ. ಸೋತ ತಂಡಕ್ಕೆ ಎರಡನೇ ಅವಕಾಶವಿದ್ದು, ಆರ್ಸಿಬಿ- ಲಖನೌ ತಂಡಗಳ ಎಲಿಮಿನೇಟರ್ ಕದನದಲ್ಲಿ ಗೆದ್ದ ತಂಡವನ್ನು ಎದುರಿಸಲಿದೆ.
ಗುಜರಾತ್ ತನ್ನ ಮೊದಲ ಐಪಿಎಲ್ ಋತುವಿನಲ್ಲೇ ಟ್ರೋಫಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಲು ಎದುರು ನೋಡುತ್ತಿದೆ. ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ದೊಡ್ಡ ಹೆಸರುಗಳಿಲ್ಲದಿದ್ದರೂ ಗುಜರಾತ್ ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿದ ಇತಿಹಾಸ ಹೊಂದಿದೆ. ಮಿಲ್ಲರ್, ರಾಗುಲ್ ತೆವಾಟಿಯ, ರಶಿದ್ ಖಾನ್ ರಂತಹ ಫಿನಿಷರ್ ಗಳು ಯಾವುದೇ ಹಂತದಲ್ಲಿ ಪಂದ್ಯವನ್ನು ಗೆಲುವನೆಡೆಗೆ ಕೊಂಡೊಯ್ಯವ ಸಾಮರ್ಥ್ಯ ಹೊಂದಿರುವುದು ಗುಜರಾತ್ ಪ್ಲಸ್ ಪಾಯಿಂಟ್. ಭರ್ಜರಿ ಫಾರ್ಮ್ನಲ್ಲಿರುವ ವೃದ್ಧಿಮಾನ್ ಸಹಾ, ಶುಭ್ಮನ್ ಗಿಲ್, ಹಾರ್ದಿಕ್ ಪಾಂಡಾ ಅವರಿರುವ ಅಗ್ರ ಕ್ರಮಾಂಕವು ಮತ್ತೊಮ್ಮೆ ಸಿಡಿದರೆ ಗುಜರಾತ್ ಗೆಲುವು ಸುಲಭ. ರಶೀದ್ ಖಾನ್, ಮೊಹಮ್ಮದ್ ಶಮಿ ಮತ್ತು ಲಾಕಿ ಫರ್ಗುಸನ್ ಅವರಿರುವ ಬೌಲಿಂಗ್ ವಿಭಾಗವೂ ಅತ್ಯಂತ ಬಲಿಷ್ಠವಾಗಿದೆ.
ರಾಜಸ್ಥಾನವು 14 ವರ್ಷಗಳ ನಂತರ ಪ್ರಶಸ್ತಿಗೆ ಮುತ್ತಿಕ್ಕುವ ಕನಸು ಕಾಣುತ್ತಿದೆ. ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್, ದೇವ್ ದತ್ ಪಡಿಕ್ಕಲ್ ರಂತಹ ಆಟಗಾರಿರುವ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ವಿಭಾಗವು ಸದೃಢವಾಗಿದೆ. ಚಾಹಲ್, ಪ್ರಸಿಧ್ ಕೃಷ್ಣ, ಟ್ರೆಂಟ್ ಬೋಲ್ಟ್, ಅಶ್ವಿನ್ ಅವರಿರುವ ಬೌಲಿಂಗ್ ವಿಭಾಗವು ಗುಜರಾತ್ ತಂಡಕ್ಕೆ ಪ್ರಭಲ ಸವಾಲೊಡ್ಡುವುದು ಖಚಿತ.
ಗುಜರಾತ್- ರಾಜಸ್ಥಾನ್ ಮುಖಾಮುಖಿ:
ಎರಡು ತಂಡಗಳು ಏಕೈಕ ಬಾರಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ಅನ್ನು 37 ರನ್‌ಗಳಿಂದ ಸೋಲಿಸಿ 1-0 ಮುನ್ನಡೆ ಸಾಧಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಐಪಿಎಲ್ ಪಂದ್ಯದ ಕೊನೆಯ ಐದು ಫಲಿತಾಂಶಗಳು:
ನಡೆದ ಒಟ್ಟು ಪಂದ್ಯಗಳು: 78
ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದ ಪಂದ್ಯ: 30
ಎರಡನೇ ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದ ಪಂದ್ಯ: 47
ದಾಖಲಿಸಲಾದ ಅತ್ಯಧಿಕ ಮೊತ್ತ: 232/2 (ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್, 2019)
ದಾಖಲಾದ ಕಡಿಮೆ ಮೊತ್ತ: 49/10 (ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್, 2017).