ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಅಂದರೆ ಒಂದು ಸಂಭ್ರಮ, ಪ್ರತಿಯೊಬ್ಬರ ಬದುಕಿನಲ್ಲೂ ಬರುವ ಒಂದು ಆಚರಣೆ. ಮೊದಲು ಹಿರಿಯರು ನೋಡಿ ಮಾಡಿದ ಮದುವೆ ಮಾತ್ರ ಮನ್ನಣೆ ಸಿಗುತ್ತಿತ್ತು. ಆದರೆ ಪ್ರಸ್ತುತ ಅವೆಲ್ಲ ಗಾಳಿಗೆ ತೂರಿ, ಅನೇಕ ರೀತಿಯ ಮದುವೆಗಳು ಅಸ್ತಿತ್ವದಲ್ಲಿವೆ. ಲವ್ ಮ್ಯಾರೇಜ್‌ನಲ್ಲಿ ಈ ಸೆಲ್ಪ್ ಲವ್ ಮ್ಯಾರೇಜ್ ಎಂಥದ್ದೋ ಮಾರಾಯಾ..? ಇದುವರೆಗೂ ಯಾರೂ ಊಹೆ ಮಾಡದ ಘಟನೆಯೊಂದು ಗುಜರಾತ್‌ನಲ್ಲಿ ಮನೆ ಮಾಡಿದೆ. 24 ವರ್ಷದ ಕ್ಷಮಾ ಬಿಂದು ಎಂಬ ಯುವತಿ ಜೂನ್ 11 ರಂದು ವಿವಾಹವಾಗಲಿದ್ದಾರೆ. ಭಾರತದಲ್ಲಿ ಇಂತಹ ಮದುವೆ ನಡೆಯಲಿರುವುದು ಇದೇ ಮೊದಲು.
ಹಿಂದೂ ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದರೂ, ತನಗೆ ತಾನೇ ಮೂರು ಗಂಟು ಹಾಕಿಕೊಳ್ಳಲು ಯುವತಿ ನಿರ್ಧಾರ ಮಾಡಿದ್ದಾಳೆ. ಕೇಳಲು ವಿಚಿತ್ರ ಆದರೂ ಇದೇ ಸತ್ಯ. ಮದುವೆಯ ನಂತರ ಗೋವಾಗೆ ಹನಿಮೂನ್ ಪ್ಲಾನ್ ಕೂಡ ಮಾಡಿದ್ದಾರಂತೆ. ಗೋತ್ರಿಯ ದೇವಸ್ಥಾನದಲ್ಲಿ ನಡೆಯಲಿರುವ ಮದುವೆಯಲ್ಲಿ ಕ್ಷಮಾ ಐದು ಪ್ರಮಾಣಗಳನ್ನು ಮಾಡಲಿದ್ದಾರಂತೆ. ಇದು ಸಂಪೂರ್ಣ ಮಹಿಳೆಯರಿಗೆ ಸಂಬಂಧಿಸಿದ ವಿಷಯವಾದ್ದರಿಂದ ಈ ಬಗ್ಗೆ ಮಾಹಿತಿ ನೀಡುವುದು ನನ್ನ ಕರ್ತವ್ಯ ಎಂದಿದ್ದಾರೆ.
ನಾನು ಎಂದಿಗೂ ಮದುವೆಯಾಗಲು ಬಯಸಲಿಲ್ಲ. ಆದರೆ ಮದುಮಗಳಾಗುವ ಅನಿವಾರ್ಯತೆ ಬಂದೊದಗಿದೆ ಹಾಗಾಗಿ ನಾನು ಮದುವೆಯಾಗುತ್ತಿದ್ದೇನೆ. ಭಾರತದಲ್ಲಿ ಇಂತಹ ಮದುವೆ ಇದುವರೆಗೂ ನಡೆದಿಲ್ಲ. ಸ್ವಯಂ ವಿವಾಹವು ಮಿತಿಯಿಲ್ಲದ ಪ್ರೀತಿಯನ್ನು ತೋರಿಸುತ್ತದೆ. ಇದು ನೀವು ಒಪ್ಪಿಕೊಳ್ಳಲೇಬೇಕಾದ ವಿಷಯ. ಕೆಲವರು ಪ್ರೀತಿಸಿದವರನ್ನು ಮದುವೆಯಾಗುತ್ತಾರೆ. ಆದರೆ, ನಾನು ನನ್ನನ್ನು ಪ್ರೀತಿಸುತ್ತೇನೆ. ಅದಕ್ಕಾಗಿಯೇ ನನ್ನನ್ನು ನಾನು ಮದುವೆಯಾಗುತ್ತಿದ್ದೇನೆ ಎಂದರು. ಆಕೆಯ ನಿರ್ಧಾರಕ್ಕೆ ಪೋಷಕರು ಕೂಡ ಮುಕ್ತ ಮನಸ್ಸಿನಿಂದ ಮದುವೆಗೆ ಸಮ್ಮತಿ ಸೂಚಿಸಿದ್ದಾರಂತೆ.