ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ 14ನೇ ಸುತ್ತಿನ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ತಮ್ಮ 18ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ಗುಕೇಶ್ ಅವರ ಐತಿಹಾಸಿಕ ಗೆಲುವು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರವರೆಗೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.
ಗುಕೇಶ್ ಐತಿಹಾಸಿಕ ಗೆಲುವಿನ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿ ಪೋಸ್ಟ್ ಹಂಚಿಕೊಂಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ‘ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಅತ್ಯಂತ ಕಿರಿಯ ಆಟಗಾರನಾಗಿರುವ ಗುಕೇಶ್‌ಗೆ ಹೃತ್ಪೂರ್ವಕ ಅಭಿನಂದನೆಗಳು. ಅವರು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರ ಗೆಲುವು ಚೆಸ್ ಸೂಪರ್ ಪವರ್ ಆಗಿ ಭಾರತದ ಅರ್ಹತೆಯನ್ನು ಪ್ರತಿಬಿಂಬಿಸುತ್ತದೆ. ಗುಕೇಶ್ ಉತ್ತಮ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬ ಭಾರತೀಯನ ಪರವಾಗಿ, ನೀವು ಭವಿಷ್ಯದಲ್ಲಿಯೂ ಯಶಸ್ವಿಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅಚಲ ದೃಢಸಂಕಲ್ಪದ ಫಲ- ಪ್ರಧಾನಿ
ಪ್ರಧಾನಿ ಮೋದಿ ಕೂಡ ಗುಕೇಶ್ ಅವರನ್ನು ಅಭಿನಂದಿಸಿದ್ದು, ‘ಐತಿಹಾಸಿಕ ಮತ್ತು ಅನುಕರಣೀಯ! ಡಿ ಗುಕೇಶ್ ಅವರ ಗಮನಾರ್ಹ ಸಾಧನೆಗೆ ಅಭಿನಂದನೆಗಳು. ಇದು ಅವರ ಅನನ್ಯ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಅಚಲ ದೃಢಸಂಕಲ್ಪದ ಫಲ. ಅವರ ಗೆಲುವು ಚೆಸ್ ಇತಿಹಾಸದಲ್ಲಿ ಅವರ ಹೆಸರನ್ನು ಸ್ಮರಣೀಯಗೊಳಿಸಿರುವುದು ಮಾತ್ರವಲ್ಲದೆ ಲಕ್ಷಾಂತರ ಯುವ ಮನಸ್ಸುಗಳು ದೊಡ್ಡ ಕನಸು ಕಾಣಲು ಪ್ರೇರೇಪಿಸಿದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.