ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಭಾನುವಾರ ರಾತ್ರಿ ಶ್ವೇತಭವನದ ಸಮೀಪದ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಬಂದ ಹಿನ್ನೆಲೆ ಕೆಲಕಾಲ ಆತನಕದ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಪಡೆಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡವು.
ಮಾಹಿತಿಯ ಪ್ರಕಾರ, ವೈಟ್ ಹೌಸ್ ಎದುರಿನ ಲಫಾಯೆಟ್ ಪಾರ್ಕ್ ಪ್ರದೇಶದ ಬಳಿ ಗುಂಡಿನ ಶಬ್ಧ ಕೇಳಿಬಂದಿದೆ. ಘಟನೆ ಸಂಭವಿಸಿದ ಸಮಯದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು ಎಂದು ವರದಿಗಳು ತಿಳಿಸಿವೆ. ಇದರಿಂದಾಗಿ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ತಕ್ಷಣವೇ ಭದ್ರತಾ ವಲಯವನ್ನು ಮತ್ತಷ್ಟು ಬಿಗಿಗೊಳಿಸಿದರು.
ಇದನ್ನೂ ಓದಿ:
ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಯುಎಸ್ ಸೀಕ್ರೆಟ್ ಸರ್ವಿಸ್, ಸ್ಥಳೀಯ ಪೊಲೀಸ್ ಹಾಗೂ ಪಾರ್ಕ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿದರು. ಪ್ರಾಥಮಿಕ ತನಿಖೆಯ ಪ್ರಕಾರ, ಗುಂಡಿನ ದಾಳಿಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಶಂಕಿತ ವ್ಯಕ್ತಿ ಅಥವಾ ಯಾವುದೇ ವಾಹನದ ಬಗ್ಗೆ ತನಿಖೆ ಮುಂದುವರಿದಿದ್ದು, ಈವರೆಗೆ ಯಾರನ್ನೂ ಬಂಧಿಸಿರುವ ಮಾಹಿತಿ ಹೊರಬಂದಿಲ್ಲ. ಘಟನೆಯ ನಿಖರ ಕಾರಣ ಮತ್ತು ಉದ್ದೇಶ ತಿಳಿದುಬರಬೇಕಿರುವುದರಿಂದ ಅಧಿಕಾರಿಗಳು ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ಶ್ವೇತಭವನ ಸುತ್ತಮುತ್ತ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.



