ಹೊಸದಿಗಂತ ಬೆಳಗಾವಿ:
ಇಲ್ಲಿನ ಮಂಡೋಳಿ ರಸ್ತೆಯಲ್ಲಿ ತಡರಾತ್ರಿ ವಕೀಲೆಯೊಬ್ಬರ ಮನೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ವಕೀಲೆಯ ಮಗಳು ಕೆಲವೇ ಕ್ಷಣಗಳ ಮುನ್ನ ಸ್ಥಳದಿಂದ ಸರಿದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ನಗರದ ಮಂಡೋಳಿ ರಸ್ತೆ ನಿವಾಸಿ, ವಕೀಲೆ ಪೂಜಾ ಕಾಕತಕರ್ ಅವರ ಮನೆಯ ಮೊದಲ ಮಹಡಿಯ ಮೇಲೆ ಏಪ್ರಿಲ್ 25ರ ಶನಿವಾರ ತಡರಾತ್ರಿ ಈ ದಾಳಿ ನಡೆದಿದೆ. ಘಟನೆಯ ಸಮಯದಲ್ಲಿ ವಕೀಲೆಯ ಮಗಳು ಮೊದಲ ಮಹಡಿಯಲ್ಲಿ ಕುಳಿತಿದ್ದರು. ಸಮಯ ಹೆಚ್ಚಾದ ಕಾರಣ ಪೋಷಕರು ಆಕೆಯನ್ನು ಕೆಳಗೆ ಬರುವಂತೆ ಕರೆದಿದ್ದಾರೆ. ಮಗಳು ಕೆಳಗೆ ಬಂದ ಕೇವಲ ಐದಾರು ನಿಮಿಷಗಳಲ್ಲೇ ದುಷ್ಕರ್ಮಿಗಳು ಕಿಟಕಿಯತ್ತ ಗುಂಡು ಹಾರಿಸಿದ್ದಾರೆ.
ದಾಳಿಯ ತೀವ್ರತೆಗೆ ಕಿಟಕಿಯ ಗಾಜುಗಳು ಸಂಪೂರ್ಣವಾಗಿ ಪುಡಿಯಾಗಿವೆ. ಫೈರಿಂಗ್ ನಡೆಸಿದ ಕೂಡಲೇ ದುಷ್ಕರ್ಮಿಗಳು ಕತ್ತಲಲ್ಲಿ ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಕೀಲೆ ಪೂಜಾ ಕಾಕತಕರ್ ಅವರು ನೀಡಿದ ದೂರಿನ ಮೇರೆಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಎಫ್‌ಎಸ್‌ಎಲ್ (FSL) ತಂಡವು ಸ್ಥಳ ಪರಿಶೀಲನೆ ನಡೆಸಿ, ಬಿದ್ದಿದ್ದ ಗುಂಡಿನ ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿಕೋರರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಲಾಗುತ್ತಿದ್ದು, ತನಿಖೆ ಚುರುಕುಗೊಂಡಿದೆ.



