ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂ ಜನಜಾಗೃತಿ ಸಮಿತಿ ಸಾರಥ್ಯದಲ್ಲಿ ಬುಧವಾರ ದೇಶದ ೬೪ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಭಾವಪೂರ್ಣವಾಗಿ ಆಚರಿಸಲಾಗಿದ್ದು, ಇದರ ಭಾಗವಾಗಿ ಮಂಗಳೂರಿನ ಕೊಡಿಯಾಲ್ಬೈಲ್ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಕೂಟಕ್ಕಳ ಆಡಿಟೋರಿಯಂನಲ್ಲಿ ಕೂಡಾ ಕಾರ್ಯಕ್ರಮ ಹಮ್ಮಿಕೊಂಡು ಧರ್ಮಾಚರಣೆ, ಆಧ್ಯಾತ್ಮಿಕ ಸಾಧನೆ ಹಾಗೂ ರಾಷ್ಟ್ರಸೇವೆಯ ಮಹತ್ವವನ್ನು ಪ್ರತಿಪಾದಿಸಲಾಯಿತು.
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಡಾ. ಪ್ರಣವ್ ಮಲ್ಯ, ಇಂದಿನ ಜಾಗತಿಕ ಅಸ್ಥಿರತೆ ಮತ್ತು ಮಾನಸಿಕ ಒತ್ತಡದ ಸಂದರ್ಭದಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಹಾಗೂ ಧರ್ಮಾಚರಣೆ ಅತ್ಯಗತ್ಯ. ಲವ್ ಜಿಹಾದ್, ಮತಾಂತರ, ವೈಚಾರಿಕ ಆಘಾತಗಳಂತಹ ಷಡ್ಯಂತ್ರಗಳ ಕುರಿತು ಜಾಗೃತರಾಗಿರಬೇಕು, ಧರ್ಮಶಿಕ್ಷಣವನ್ನು ಪಡೆದು ಧರ್ಮರಕ್ಷಣೆಯಲ್ಲಿ ಸಕ್ರಿಯರಾಗುವುದು, ಪ್ರಥಮ ಚಿಕಿತ್ಸೆ, ಸ್ವರಕ್ಷಣೆಯಂತಹ ಆಪತ್ಕಾಲೀನ ಕೌಶಲ್ಯ ಮೈಗೂಡಿಸಿಕೊಳ್ಳುವುದು, ದಿನನಿತ್ಯ ಕುಲದೇವತೆ-ದತ್ತರ ನಾಮಜಪ ಹಾಗೂ ಸ್ತೋತ್ರ ಪಠಣದ ಮೂಲಕ ರಾಷ್ಟ್ರ ಮತ್ತು ಧರ್ಮ ಸೇವೆಗೆ ಸಮರ್ಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.

ರಾಜೇಶ್ ಶೆಟ್ಟಿ ಮಾತನಾಡಿ, ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿದ್ದು, ತುಳುನಾಡಿನ ನಾಥ ಪರಂಪರೆಯ ಮತ್ಸ್ಯೇಂದ್ರನಾಥ ಮತ್ತು ಗೋರಖನಾಥರ ಬಾಂಧವ್ಯವು ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಜಪ-ಸಾಧನೆಯ ಮೂಲಕ ಗುರುತತ್ವ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಗುರುವಿನ ಅನುಗ್ರಹವಿದ್ದರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವ್ಯಾಸಪೂಜೆ, ಗುರುಪೂಜೆ, ನಾಮಜಪ, ಧರ್ಮರಕ್ಷಕರ ಸತ್ಕಾರ, ಕಿರುಚಿತ್ರ ಪ್ರದರ್ಶನ, ಗ್ರಂಥ ಹಾಗೂ ರಾಷ್ಟ್ರ-ಧರ್ಮ ವಿಷಯದ ಪ್ರದರ್ಶನಗಳು ನಡೆದವು.
ಹಿಂದೂ ಮಹಾಸಭಾದ ಅಧ್ಯಕ್ಷ ಲೋಹಿತ್ ಸುವರ್ಣ, ಹಿಂದೂ ಸೇವಾ ಸಮಿತಿ ಜಪ್ಪಿನಮೊಗರು ಅಧ್ಯಕ್ಷ ಯೋಗೀಶ್ ರೈ, ಶಾಸಕ ವೇದವ್ಯಾಸ ಕಾಮತ್, ಜಪ್ಪಿನಮೊಗರಿನ ಮಾಜಿ ಕಾರ್ಪೊರೇಟರ್ ಸುರೇಂದ್ರ, ಬಜಾಲ್ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ರಾಮಚಂದ್ರ ಆಳ್ವ, ವಕೀಲರಾದ ಸುಜಯ್ ಶೆಟ್ಟಿ ಹಾಗೂ ಸುರತ್ಕಲ್ ಸಾರ್ವಜನಿಕ ಶಾರದಾ ಮಹೋತ್ಸವದ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸುಮಾರು 400ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಮಹೋತ್ಸವದಲ್ಲಿ ಪಾಲ್ಗೊಂಡರು.



