ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರ್ ಇಂಡಿಯಾ AI-171 ವಿಮಾನ ದುರಂತದ ತನಿಖೆ ಅಂತಿಮ ಹಂತ ತಲುಪಿದ್ದು, ವಿಮಾನದ ಫ್ಯುಯೆಲ್ ಕಂಟ್ರೋಲ್ ಸ್ವಿಚ್‌ನಲ್ಲಿ ಯಾವುದೇ ತಾಂತ್ರಿಕ ದೋಷ ಪತ್ತೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಡ್ರೀಮ್‌ಲೈನರ್ ವಿಮಾನದ ಇಂಧನ ನಿಯಂತ್ರಣ ವ್ಯವಸ್ಥೆಯ ಲಾಕಿಂಗ್ ವ್ಯವಸ್ಥೆಯನ್ನು ಬೋಯಿಂಗ್ ತಜ್ಞರು ಪರಿಶೀಲಿಸಿದ್ದು, ಯಾವುದೇ ಅಸಾಮಾನ್ಯತೆ ಕಂಡುಬಂದಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ.
ಥ್ರಸ್ಟ್ ಕಂಟ್ರೋಲ್ ಮಾಡ್ಯೂಲ್ ಪರಿಶೀಲನೆ ಇನ್ನೂ ಮುಂದುವರಿಕೆ
ಫೆಬ್ರವರಿಯಲ್ಲಿ ಲಂಡನ್–ಬೆಂಗಳೂರು ವಿಮಾನದ ಪೈಲಟ್ ನೀಡಿದ್ದ ತಾಂತ್ರಿಕ ವರದಿಯ ಹಿನ್ನೆಲೆಯಲ್ಲಿ ಡಿಜಿಸಿಎ ನಿರ್ದೇಶನದಂತೆ ಬೋಯಿಂಗ್ ಈ ಪರೀಕ್ಷೆ ನಡೆಸಿತ್ತು. ಸದ್ಯ ವಿಮಾನದ ಸಂಪೂರ್ಣ ಥ್ರಸ್ಟ್ ಕಂಟ್ರೋಲ್ ಮಾಡ್ಯೂಲ್‌ನ್ನು ಅಮೆರಿಕದ ಸಿಯಾಟಲ್‌ನಲ್ಲಿರುವ ಬೋಯಿಂಗ್ ಘಟಕದಲ್ಲಿ ಪರಿಶೀಲಿಸಲಾಗುತ್ತಿದ್ದು, ಅದರ ವರದಿ ಇನ್ನೂ ಬಾಕಿಯಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ:
ಅಂತಿಮ ವರದಿ ಶೀಘ್ರದಲ್ಲೇ ಸಾರ್ವಜನಿಕರಿಗೆ
ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ AI-171 ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು 260 ಮಂದಿ ಮೃತಪಟ್ಟಿದ್ದರು. ಈ ದುರಂತದ ಎಲ್ಲ ಕಾರಣಗಳನ್ನು ಸಮಗ್ರವಾಗಿ ತನಿಖೆ ಮಾಡಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಅಂತಿಮ ವರದಿಯನ್ನು ವಿಮಾನ ಅಪಘಾತ ತನಿಖಾ ದಳ (AAIB) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ಪ್ರಕಟಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.



