ಹೊಸದಿಗಂತ ಡಿಜಿಟಲ್ ಡೆಸ್ಕ್:
ಶೃಂಗಾರ ಗೌರಿ ದೇವಸ್ಥಾನದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿಯ ಒಳಗೆ ವೀಡಿಯೋ ಮಾಡುವ ಕೋರ್ಟ್ ಆದೇಶವನ್ನು ಗ್ಯಾನವಾಪಿ ಮಸೀದಿಯು ವಿರೋಧಿಸಿದೆ. ಈ ಹಿಂದೆ ಮಸೀದಿಯ ಆವರಣದೊಳಗೆ ತನಿಖೆ ಮಾಡಲು ಸ್ಥಳೀಯ ಕೋರ್ಟ್ ಆದೇಶ ನೀಡಿತ್ತು. ಆದರೆ ಮಸೀದಿಯ ಆಡಳಿತ ಮಂಡಳಿಯು ಕೋರ್ಟ್ ತನ್ನ ವಾದವನ್ನು ಸರಿಯಾಗಿ ಆಲಿಸಿಲ್ಲವೆಂದು ಆರೋಪಿಸಿ ಕೋರ್ಟ್ ಅದೇಶವನ್ನು ಧಿಕ್ಕರಿಸಿ ಮಸೀದಿಯ ಒಳಗೆ ವೀಡಿಯೋ ಚಿತ್ರೀಕರಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದೆ. ನ್ಯಾಯಾಲಯದ ಆದೇಶವನ್ನೇ ವಿರೋಧಿಸುವ ನಡೆಯ ಮೂಲಕ ಮಸೀದಿ ಏನನ್ನು ಮುಚ್ಚಿಡಲು ಹೊರಟಿದೆ ಎಂಬ ಶಂಕೆ ಮೂಡಲು ಕಾರಣವಾಗಿದೆ.
ಈ ಕುರಿತು ಅಂಜುಮನ್ ಇಂತೇಜಾಮಿಯಾ ಮಸೀದಿ ವ್ಯವಸ್ಥಾಪಕ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್‌ಎಂ ಯಾಸಿನ್ “ವೀಡಿಯೋಗ್ರಫಿ ಮತ್ತು ಸಮೀಕ್ಷೆಗಾಗಿ ನಾವು ಯಾರಿಗೂ ಮಸೀದಿಗೆ ಪ್ರವೇಶಿಸಲು ಅನುಮತಿಸುವುದಿಲ್ಲ. ಗ್ಯಾನವಾಪಿ ಮಸೀದಿಯ ಆಡಳಿತ ಸಮಿತಿಯು ನ್ಯಾಯಾಲಯದ ಈ ನಿರ್ಧಾರವನ್ನು ವಿರೋಧಿಸುತ್ತದೆ” ಎನ್ನುವ ಮೂಲಕ ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿದ್ದಾರೆ.
ಔರಂಗಜೇಬನು ಸ್ವಯಂಭೂ ಕಾಶಿವಿಶ್ವನಾಥನ ಮೂಲ ವಿಗ್ರಹವನ್ನು ನಾಶಪಡಿಸಿ ದೇವಾಲಯವನ್ನು ಕೆಡವಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಿದ್ದ ಎಂದು ಆರೋಪಿಸಿ ದೇವಾಲಯದ ಪುನರ್ ನಿರ್ಮಾಣಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಂಡಿತ್ತು.
ಏಪ್ರಿಲ್ 26 ರಂದುವಾರಣಾಸಿಯ ಸಿವಿಲ್ ನ್ಯಾಯಾಧೀಶರಾದ ರವಿಕುಮಾರ್ ದಿವಾಕರ್ ರವರು ಶೃಂಗಾರ ಗೌರಿ ದೇವಸ್ಥಾನದ ವಿಷಯಕ್ಕೆ ಸಂಬಂಧಿಸಿದಂತೆ ಗ್ಯಾನವಾಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ಮಂದಿರ ಸಂಕೀರ್ಣದಲ್ಲಿ ವೀಡಿಯೋ ಚಿತ್ರೀಕರಿಸಿ ತನಿಖೆ ನಡೆಸಲು ಆದೇಶ ನೀಡಿದ್ದರು.
ಆದರೆ ಪ್ರಸ್ತುತ ಮಸೀದಿಯು ನ್ಯಾಯಾಲಯದ ಆದೇಶವನ್ನು ವಿರೋಧಿಸಿ ವಿಡಿಯೋಗ್ರಫಿ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದೆ. ಉಳಿದೆಲ್ಲ ವಿಷಯಗಳಲ್ಲಿ ಕಾನೂನು ಸಂವಿಧಾನ ಎಂದು ಬೊಬ್ಬೆಯಿಡುವ ಮಸೀದಿಗಳು ಕಾನೂನಿನ ರಕ್ಷಕನಾದ ನ್ಯಾಯಾಂಗದ ಆದೇಶವನ್ನೇ ಧಿಕ್ಕರಿಸುತ್ತಿರುವುದು ವಿಪರ್ಯಾಸ.