ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಸೋಮವಾರ ಬೆಳಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI) ಸಮೀಕ್ಷೆ ಆರಂಭಿಸಿದೆ. ಭಾನುವಾರ, ಎಎಸ್‌ಐ ತಂಡ ಎಲ್ಲಾ ಅಗತ್ಯ ಸಲಕರಣೆಗಳೊಂದಿಗೆ ವಾರಣಾಸಿ ತಲುಪಿತು. ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಸೋಮವಾರ ಬೆಳಗ್ಗೆ ಎಎಸ್‌ಐ ಅಧಿಕಾರಿಗಳು ಮಸೀದಿಗೆ ಆಗಮಿಸಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ನಡುವೆ ಇಲಾಖೆಯ 40ತಜ್ಞರ ತಂಡ ಮಸೀದಿ ಪ್ರವೇಶಿಸಿದರು.
ಶಿವಲಿಂಗ ರೀತಿಯ ರಚನೆ ವಝುಖಾನಾ ಹೊರತುಪಡಿಸಿ, ಇಡೀ ಮಸೀದಿಯನ್ನು ಸಮೀಕ್ಷೆ ಮಾಡಲು ಕಾರ್ಬನ್ ಡೇಟಿಂಗ್ ಮತ್ತು ಇತರ ವಿಧಾನಗಳನ್ನು ನ್ಯಾಯಾಲಯವು ಅನುಮತಿಸಿದೆ. ಮಸೀದಿಯನ್ನು ಹಿಂದು ದೇವಾಲಯದ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಕೆಲವು ಮಹಿಳೆಯರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಈ ಆದೇಶ ನೀಡಿದೆ.
ಮಸೀದಿಯ ಒಳಗೆ ಪ್ರಾಚೀನ ಹಿಂದು ದೇವರು ಮತ್ತು ದೇವತೆಗಳ ಪ್ರತಿಮೆಗಳು ವೈಜ್ಞಾನಿಕ ಸಮೀಕ್ಷೆಯಿಂದ ಮಾತ್ರ ಸತ್ಯ ಬಯಲಾಗುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಆಗಸ್ಟ್ 4ರೊಳಗೆ ಜಿಲ್ಲಾ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಆದೇಶಿಸಲಾಗಿದೆ.
ಹಿಂದೂಗಳ ಪರವಾಗಿ ವಿಷ್ಣು ಶಂಕರ್ ಜೈನ್ ಎಂಬ ವಕೀಲರು ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದರು. ವಾರಣಾಸಿ ಜಿಲ್ಲಾ ನ್ಯಾಯಾಲಯವು ಜುಲೈ 14 ರಂದು ವಾದವನ್ನು ಆಲಿಸಿ, ಎಲ್ಲ ಅಂಶಗಳನ್ನು ಪರಿಗಣಿಸಿ ಸಮೀಕ್ಷೆಗೆ ಅವಕಾಶ ನೀಡಲಾಗಿದೆ ಎಂದು ತೀರ್ಪು ಹೊರಬಿದ್ದಿದೆ.