July 16, 2026
Thursday, July 16, 2026
spot_img

ಬಿಡದಿ ಟೌನ್‌ಶಿಪ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಕಿಡಿ: ಇದು ಸರ್ಕಾರಿ ರಿಯಲ್ ಎಸ್ಟೇಟ್ ಯೋಜನೆ ಎಂದ ಕೇಂದ್ರ ಸಚಿವ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಭಾರೀ ಸದ್ದು ಮಾಡಿರುವ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಮತ್ತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗುಡುಗಿದ್ದು, ಇದು ಸರ್ಕಾರಿ ರಿಯಲ್ ಎಸ್ಟೇಟ್ ಯೋಜನೆಯಾಗಿದೆ ಎಂದು ಟೀಕಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಯೋಜನೆಯನ್ನು ಭೂ ಮಾಫಿಯಾ ಹಾಗೂ ಭೂ ಲೂಟಿಕೋರರಿಗೆ ಲಾಭ ಮಾಡಿಕೊಡಲು ರೂಪಿಸಲಾಗಿದೆ. ಇದರಲ್ಲಿ ರೈತರಿಗೆ ಯಾವ ಲಾಭವು ಇಲ್ಲ. ಅದಕ್ಕಾಗಿ ಇದನ್ನು ಸರಕಾರಿ ರಿಯಲ್ ಎಸ್ಟೇಟ್ ದಂಧೆ ಎಂದು ಕರೆಯುತ್ತೇನೆ ಎಂದು ಆಕ್ರೋಶ ಹೊರಹಾಕಿದರು.

ಬೆಂಗಳೂರು ಅಭಿವೃದ್ಧಿಗೆ ಉಪಯೋಗವು ಇಲ್ಲ

ಈ ಯೋಜನೆಯಿಂದ ಬೆಂಗಳೂರು ಅಭಿವೃದ್ಧಿಗೆ ಯಾವ ಉಪಯೋಗವು ಇಲ್ಲ. ಕೇವಲ ತಮ್ಮ ಸ್ವಾರ್ಥಕ್ಕಾಗಿ, ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಕೈಜೋಡಿಸಿ ರೈತರ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದ್ದಾರೆ. ಆದರೆ ನಮ್ಮ ಪಕ್ಷವು ರೈತರ ಪರವಾಗಿ ನಿಲ್ಲುತ್ತದೆ. ಅವರ ಜತೆ ನಿಂತು ಹೋರಾಟ ನಡೆಸುತ್ತದೆ ಎಂದು ಹೇಳಿದರು.

ಗುಜರಾತ್‌ನಲ್ಲಿ ಟೌನ್‌ಶಿಪ್ ಮಾಡಿದ್ದ ಜಾಗ ಯಾವುದು?

ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಬೆಂಬಲಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಅದು ನಿಜವೋ ಅಲ್ಲವೋ ಗೊತ್ತಿಲ್ಲ. ಇನ್ನು ಪ್ರಧಾನಿ ಅವರು ಗುಜರಾತ್‌ನಲ್ಲಿ ಹಲವಾರು ಟೌನ್‌ಶಿಪ್​ಗಳನ್ನು ಮಾಡಿದ್ದಾರೆ. ಅವರು ಟೌನ್‌ಶಿಪ್ ಮಾಡಿದ್ದ ಜಾಗ ಯಾವುದು? ಭೂಕಂಪದಿಂದ ಸಂಪೂರ್ಣವಾಗಿ ನಾಶವಾಗಿದ್ದ ಪ್ರದೇಶದಲ್ಲಿ ಯೋಜನೆಗಳನ್ನು ತಂದರು. ಆದರೆ, ಬಿಡದಿಯಲ್ಲಿ ಬೇರೆ ಪರಿಸ್ಥಿತಿ ಇದೆ. ಇಲ್ಲಿ ತೋಟಗಳಿವೆ, ಹೈನುಗಾರಿಕೆ ನಡೆಯುವ ಭೂಮಿಯಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳು ಪ್ರಧಾನಿಗಳಿಗೆ ಹೇಳಿದ್ದಾರಾ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಕಾನೂನು ಹೋರಾಟ

ಮುಖ್ಯಮಂತ್ರಿಗಳು ರಾಜ್ಯದ ರೈತರ ಹಿತ ಬಲಿ ಕೊಡುವುದಕ್ಕೆ ಪ್ರಧಾನಿಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಈ ಕುರಿತು ಕಾನೂನಿನಲ್ಲಿ ಏನು ಹೋರಾಟ ಮಾಡಬೇಕೋ ಮಾಡುತ್ತೇವೆ. ರೈತರಿಗೆ ನ್ಯಾಯ ಕೊಡಿಸಲಿದ್ದೇವೆ. ರೈತರ ಪರ ನಿಲ್ಲುವುದು ಜನಪ್ರತಿನಿಧಿಗಳ ಕರ್ತವ್ಯ. ಆ ಕೆಲಸವನ್ನು ನಾವು ಮಾಡುತ್ತೇವೆ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !