ಕಾಸರಗೋಡು ಜಿಲ್ಲೆಯಲ್ಲಿ H1N1 ಪ್ರಕರಣ ಪತ್ತೆ: ಕಟ್ಟೆಚ್ಚರಕ್ಕೆ ಸೂಚನೆ

ಹೊಸದಿಗಂತ ವರದಿ ಕಾಸರಗೋಡು:
ಒಂದೆಡೆ ಧಾರಾಕಾರ ಮಳೆ ಮುಂದುವರಿದಿದ್ದು , ಇನ್ನೊಂದೆಡೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಎಚ್ 1 ಎನ್ 1 ರೋಗಬಾಧೆ ಕಂಡುಬರಲಾರಂಭಿಸಿದೆ. ಈ ನಿಟ್ಟಿನಲ್ಲಿ ಜನರು ಜಾಗ್ರತೆ ವಹಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ.ರಾಮದಾಸ್ ಸಲಹೆ ನೀಡಿದ್ದಾರೆ.
ಎಚ್ 1 ಎನ್ 1 ಎಂಬುದು ಇನ್‍ಫ್ಲುವೆನ್ಸಾ ಎ ಎಂಬ ಗುಂಪಿಗೆ ಸೇರಿದ ವೈರಸ್ ಆಗಿದ್ದು, ಇದು ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡುಬರುತ್ತದೆ. ಹಂದಿಗಳ ಜೊತೆ ನಿಕಟ ಸಂಪರ್ಕದಲ್ಲಿರುವವರಿಗೆ ರೋಗ ಹರಡುವ ಅಪಾಯ ಹೆಚ್ಚಾಗಿದೆ. ಈ ರೋಗಾಣುಗಳು ಗಾಳಿಯ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.

ರೋಗ ಲಕ್ಷಣಗಳು:
ಜ್ವರ, ಶಾರೀರಿಕ ನೋವು, ಗಂಟಲು ನೋವು, ಕಫ ಇಲ್ಲದೆ ಒಣ ಕೆಮ್ಮು, ಆಯಾಸ, ಅತಿಸಾರ ಇವುಗಳು ಎಚ್ 1 ಎನ್ 1 ರೋಗದ ಪ್ರಮುಖ ಲಕ್ಷಣಗಳಾಗಿವೆ. ಬಹುತೇಕ ಮಂದಿ ಸಾಮಾನ್ಯ ಜ್ವರದಂತೆ ನಾಲ್ಕೈದು ದಿನಗಳಲ್ಲಿ ಗುಣಮುಖರಾಗುತ್ತಾರೆ. ಆದರೆ ಕೆಲವರಲ್ಲಿ ಕಾಯಿಲೆ ಗಂಭೀರವಾಗಬಹುದು. ಅದನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಕೆಲವರಿಗೆ ಶ್ವಾಸಕೋಶದ ಸೋಂಕು, ಮಿದುಳಿನ ಸೋಂಕು ಮತ್ತು ಅಸ್ತಿತ್ವದಲ್ಲಿರುವ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.
ರೋಗಿಯು ಸೀನಿದಾಗ, ಕೆಮ್ಮಿದಾಗ ಅಥವಾ ಮೂಗು ಶುಚಿಗೊಳಿಸುವಾಗ ವೈರಸ್ ಗಾಳಿಯ ಮೂಲಕ ಹರಡುತ್ತದೆ. ವೈರಸ್ ಸುಮಾರು ಒಂದು ಮೀಟರ್ ವ್ಯಾಪ್ತಿಯಲ್ಲಿ ಹರಡಬಹುದು. ಪರಿಸರದಲ್ಲಿರುವ ವಸ್ತುಗಳ ಮೇಲೂ ವೈರಸ್ ಬದುಕಬಲ್ಲುದು. ಅಂತಹ ವಸ್ತುಗಳನ್ನು ಮುಟ್ಟಿದ ನಂತರ ಕೈ ತೊಳೆಯದೆ ಕಣ್ಣು ಮತ್ತು ಮೂಗು ಹಾಗೂ ಬಾಯಿಯನ್ನು ಸ್ಪರ್ಶಿಸುವುದರಿಂದ ಸಹ ಸೋಂಕು ಹರಡಲು ಕಾರಣವಾಗಬಹುದು.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 65 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, ಇತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು ದುರ್ಬಲಗೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ಹೆಚ್ಚಿನ ಜಾಗರೂಕತೆ ಪಾಲಿಸುವಂತೆಯೂ ಸೂಚಿಸಲಾಗಿದೆ.
ರೋಗ ಪ್ರತಿರೋಧಕ್ಕಾಗಿ ಮಾಸ್ಕ್ ಧರಿಸುವುದು, ಸಾರ್ವಜನಿಕವಾಗಿ ಉಗುಳದಿರುವುದು, ಅನಾರೋಗ್ಯ ಪೀಡಿತರೊಂದಿಗೆ ಬೆರೆಯದಿರುವುದು ಜೊತೆಗೆ ಶುಚಿತ್ವ ಪಾಲಿಸುವಂತೆ ನಿರ್ದೇಶಿಸಲಾಗಿದೆ. ರೋಗಲಕ್ಷಣ ಕಂಡುಬಂದಲ್ಲಿ ಸ್ವಯಂ ಚಿಕಿತ್ಸೆ ಕೈಗೊಳ್ಳದೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬೇಕು. ಎಚ್ 1ಎನ್ 1 ರೋಗಿಗಳ ಸಂಪರ್ಕದಲ್ಲಿದ್ದಲ್ಲಿ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದೂ ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!