ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯ ನೆರೆ ನೀರಿನಲ್ಲಿ ಸೋಮವಾರ ತಡ ರಾತ್ರಿ ಆನೆ ಮೃತ ದೇಹ ತೇಲಿ ಬಂದ ಘಟನೆ ನಡೆದಿದೆ.
ನಿರಂತರ ಮಳೆಯಿಂದ ತುಂಬಿ ಹರಿಯುತ್ತಿರುವ ನೀರಿನ ಮಟ್ಟವನ್ನು ವೀಕ್ಷಿಸಲೆಂದು ಸೋಮವಾರ ತಡ ರಾತ್ರಿ ಸ್ಥಳೀಯರಾದ ಮನ್ಮಥ ಬಟ್ಟೋಡಿ ಮತ್ತಿತರರು ತೆರಳಿದ್ದ ವೇಳೆ ನೆರೆ ನೀರಿನಲ್ಲಿ ದೊಡ್ಡ ವಸ್ತು ತೇಲಿ ಬರುತ್ತಿರುವುದು ಕಂಡು ಬಂದಿತು. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಆನೆ ಮೃತ ದೇಹ ಎಂಬುದು ಗೊತ್ತಾಯಿತು.
ಆನೆ ಕೆಲ ದಿನಗಳ ಹಿಂದೆಯೇ ಎಲ್ಲೋ ಮೃತಪಟ್ಟು ಈ ಭಾಗಕ್ಕೆ ತೇಲಿ ಬಂದಿರುವ ಶಂಕೆ ವ್ಯಕ್ತವಾಗಿದೆ. ಆನೆ ಮೃತದೇಹ ನೀರಿನಲ್ಲಿ ಕೊಚ್ಚಿ ಹೋಗಿದೆ.
ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕುಮಾರಧಾರಾ ಸ್ನಾನ ಘಟ್ಟ ಇನ್ನೂ ಮುಳುಗಡೆ ಸ್ಥಿತಿಯಲ್ಲೇ ಇದೆ.